ADVERTISEMENT

ತುಕಾರಾಂ ರಾಜೀನಾಮೆ ನಿಶ್ಚಿತ: ಶ್ರೀ ರಾಮುಲು

ಲೋಕಸಭಾ ಚುನಾವಣೆಗೆ ವಾಲ್ಮೀಕಿ‌ ನಿಗಮದ ಹಣ ಬಳಸಿ ಇ.ತುಕಾರಾಂ ಗೆಲುವು: ಆರೋಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 15:53 IST
Last Updated 23 ಸೆಪ್ಟೆಂಬರ್ 2024, 15:53 IST
ವಾಲ್ಮೀಕಿ ನಿಗಮದ ಹಗರಣದ ಹಣದಲ್ಲಿ ಸಂಸದ ಇ.ತುಕಾರಾಂ ಅಕ್ರಮವಾಗಿ ಜಯ ಸಾಧಿಸಿದ್ದಾರೆ ಎಂದು ಆರೋಪಿಸಿ ಸಂಡೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು
ವಾಲ್ಮೀಕಿ ನಿಗಮದ ಹಗರಣದ ಹಣದಲ್ಲಿ ಸಂಸದ ಇ.ತುಕಾರಾಂ ಅಕ್ರಮವಾಗಿ ಜಯ ಸಾಧಿಸಿದ್ದಾರೆ ಎಂದು ಆರೋಪಿಸಿ ಸಂಡೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು   

ಸಂಡೂರು: ‘ಇ.ತುಕಾರಾಂ ವಿರುದ್ಧ ನ್ಯಾಯಾಲಯದಲ್ಲಿ ಚುನಾವಣಾ ಅಕ್ರಮದ ಪ್ರಕರಣ ದಾಖಲಿಸಲಿಸಿದ್ದೇನೆ. ಅವರು ರಾಜಿನಾಮೆ ನೀಡಬೇಕಾಗುತ್ತದೆ’ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದರು.

ಬಳ್ಳಾರಿ ಲೋಕಸಭಾ ಚುನಾವಣೆಗೆ ಇ.ತುಕಾರಾಂ ವಾಲ್ಮೀಕಿ‌ ನಿಗಮದ ಹಣವನ್ನು ಬಳಸಿಕೊಂಡು ಜಯ ಸಾಧಿಸಿದ್ದಾರೆ ಎಂದು ಆರೋಪಿಸಿ ಸಂಡೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ವಾಲ್ಮೀಕಿ‌ ನಿಗಮದ ಹಣದಲ್ಲಿ ಚುನಾವಣೆ ನಡೆದಿರುವುದನ್ನು ಜಾರಿ ನಿರ್ದೇಶನಾಲಯ ತನ್ನ ದೋಷಾರೋಪ ಪಟ್ಟಿಯಲ್ಲಿ ಖಚಿತ ಪಡಿಸಿದೆ. ಬಿ.ನಾಗೇಂದ್ರ ಕಿಂಗ್ ಪಿನ್ ಆಗಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿದ್ದಾರೆ. ತುಕರಾಂ ಗೆಲುವಿಗೆ ಹಣ ಬಳಸಿದ್ದರ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡಿದ್ದು ತುಕಾರಾಂ‌ ಅವರ ಸದಸ್ಯತ್ವ ಅಸಿಂಧಯವಾಗಲಿದೆ’ ಎಂದರು. 

ADVERTISEMENT

"ಇದೇ ವಾಲ್ಮೀಕಿ ನಿಗಮದ ₹5 ಕೋಟಿ ಹಣ ಸಂಡೂರಿನ ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್ ಅವರ ಖಾತೆಯಲ್ಲಿ ಇದೆ ಎನ್ನಲಾಗುತ್ತಿದೆ. ಇನ್ನು ಸುಮಾರು ₹50 ಕೋಟಿ ಹಣ ಇನ್ನೊಂದಷ್ಟು ಕಡೆ ಅಡಗಿದ್ದು, ಅದನ್ನು ಮುಂಬರುವ ಉಪ‌ಚುನಾವಣೆಗೆ ಬಳಸುವ ಸಾಧ್ಯತೆಗಳು ಇಲ್ಲದಿಲ್ಲ’ ಎಂದರು. 

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ‘ಸಂಡೂರು ಪಟ್ಟಣಕ್ಕೆ 16 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ತಾಲ್ಲೂಕಿನ 11 ಸಾವಿರ ರೈತರಿಗೆ 10-15 ವರ್ಷದಿಂದ ಸಾಗುವಳಿ ಚೀಟಿ ಸಿಕ್ಕಿಲ್ಲ. ಸಂಡೂರಿನ‌ ಸಾವಿರಾರು ಕೋಟಿ ಹಣ ಕಾಂಗ್ರೆಸ್ ಪಕ್ಷಕ್ಕೆ ಬಳಕೆ ಆಗುತ್ತಿದೆ. ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕೆಎಂಇಆರ್‌ಸಿಯ ₹20 ಸಾವಿರ ಕೋಟಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಬಳಸಲಿದ್ದೇವೆ’ ಎಂದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರಿ ಹನುಮಂತ ಮಾತನಾಡಿ, ‘ಮಾನ ಮರ್ಯಾದೆ ಇದ್ದರೆ ತುಕಾರಾಂ ರಾಜಿನಾಮೆ ನೀಡಬೇಕಿತ್ತು. ಶೀಘ್ರವೇ ಚುನಾವಣಾ ಆಯೋಗಕ್ಕೆ ನಿಮ್ಮ ವಿರುದ್ಧ ದೂರು ನೀಡಲಿದ್ದೇವೆ.ಇಷ್ಟು ವರ್ಷದ ಆಡಳಿತದಲ್ಲಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದರು. 

ಬಿಜೆಪಿ ಮಾಜಿ ಶಾಸಕ‌ ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ಸಂಡೂರು ಉಸ್ತುವಾರಿ ಚಂದ್ರಶೇಖರ್ ಹಲಗೇರಿ, ಮಂಡಲ ಅಧ್ಯಕ್ಷ ನಾನಾ ನಿಕ್ಕಂ, ಕುಮಾರ್ ನಾಯ್ಕ್, ಹುಡೇದ ಸುರೇಶ, ವಿಠಲಾಪುರ ತಿರುಮಲ, ರಾಮಘಢ ರಘುನಾಥ, ಓಬಳೇಶ, ಜಿಸಿಬಿ ರಾಮಕೃಷ್ಣ, ದರೋಜಿ ರಮೇಶ, ತಾರಾನಗರ ಮಂಜುನಾಥ, ಹನುಮಂತಪ್ಪ, ಡಿ.ಕೃಷ್ಣಪ್ಪ, ಸುಗುಣ‌ ಇದ್ದರು. 

ವಾಲ್ಮೀಕಿ ನಿಗಮದ ಹಗರಣದ ಹಣದಲ್ಲಿ ಸಂಸದ ಇ.ತುಕಾರಾಂ ಅಕ್ರಮವಾಗಿ ಜಯ ಸಾಧಿಸಿದ್ದಾರೆ ಎಂದು ಆರೋಪಿಸಿ ಸಂಡೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೆಎಂಇಆರ್ ಸಿಯ ₹25 ಸಾವಿರಕೋಟಿ ಹಣದಲ್ಲಿ ಈಗಾಗಲೇ ₹8 ರಿಂದ 9 ಕೋಟಿ ಹಣವನ್ನು ಟೆಂಡರ್ ಕರೆಯದೆ ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ
ಶ್ರೀ ರಾಮುಲು ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.