ADVERTISEMENT

ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರಿನ ಹರಿವು ಇಳಿಮುಖ, 11 ಗೇಟ್‌ ಬಂದ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 14:11 IST
Last Updated 27 ಜುಲೈ 2021, 14:11 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬಂಡೆ ಮೇಲೆ ನಿಂತು ನೀರಿನ ಅಲೆಗಳ ನಡುವೆ ಛಾಯಾಚಿತ್ರ ತೆಗೆಸಿಕೊಂಡ ಯುವಕಪ್ರಜಾವಾಣಿ ಚಿತ್ರ: ಶಶಿಕಾಂತ ಎಸ್‌. ಶೆಂಬೆಳ್ಳಿ
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬಂಡೆ ಮೇಲೆ ನಿಂತು ನೀರಿನ ಅಲೆಗಳ ನಡುವೆ ಛಾಯಾಚಿತ್ರ ತೆಗೆಸಿಕೊಂಡ ಯುವಕಪ್ರಜಾವಾಣಿ ಚಿತ್ರ: ಶಶಿಕಾಂತ ಎಸ್‌. ಶೆಂಬೆಳ್ಳಿ   

ಹೊಸಪೇಟೆ (ವಿಜಯನಗರ): ಮೈದುಂಬಿಕೊಂಡು ಹರಿಯುತ್ತಿರುವ ಇಲ್ಲಿನ ತುಂಗಭದ್ರೆಯ ಅಬ್ಬರ ಮಂಗಳವಾರ ಸ್ವಲ್ಪಮಟ್ಟಿಗೆ ತಗ್ಗಿದೆ.

ಜಲಾಶಯದ ಒಳಹರಿವು ಕಡಿಮೆಯಾಗಿರುವುದರಿಂದ ನದಿಗೆ ನೀರು ಹರಿಸುವ ಪ್ರಮಾಣ ಕೂಡ ಕಡಿಮೆಗೊಳಿಸಲಾಗಿದೆ. ಇದರಿಂದಾಗಿ ನದಿಯಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ತಗ್ಗಿದೆ. ಹಂಪಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ಪುರಂದರದಾಸರ ಮಂಟಪದ ಗೋಪುರ ಗೋಚರಿಸುತ್ತಿದೆ. ಸ್ನಾನಘಟ್ಟ, ಚಕ್ರತೀರ್ಥದಲ್ಲೂ ನೀರು ಕಡಿಮೆಯಾಗಿದೆ.

133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿರುವುದರಿಂದ ಅದರ ಸಾಮರ್ಥ್ಯ 101ಕ್ಕೆ ಕುಸಿದಿದೆ. ಸದ್ಯ 97 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 1,09,760 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ನದಿಗೆ 68,058 ಕ್ಯುಸೆಕ್‌ ನೀರು ಹರಿಸಿದರೆ, ಕಾಲುವೆಗಳಿಗೆ 10,038 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ADVERTISEMENT

ಒಳಹರಿವು 2 ಲಕ್ಷ ಕ್ಯುಸೆಕ್‌ಗೂ ಹೆ‌ಚ್ಚಾಗಿದ್ದರಿಂದ ಸೋಮವಾರ ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳನ್ನು ತೆಗೆದು ನದಿಗೆ ಒಂದುವರೆ ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಮಂಗಳವಾರ 11 ಗೇಟ್‌ಗಳನ್ನು ಬಂದ್‌ ಮಾಡಿದ್ದು, 22 ಕ್ರಸ್ಟ್‌ಗೇಟ್‌ಗಳನ್ನು ಎರಡು ಅಡಿ ತೆಗೆದು ನೀರು ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವು ತಗ್ಗಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ದೂರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.