ADVERTISEMENT

ತುಂಗಭದ್ರಾ ಜಲಾಶಯ ವಿಚಾರದಲ್ಲಿ ಸರ್ಕಾರಗಳಿಂದ ಮಲತಾಯಿ ಧೋರಣೆ: ರೈತ ಮುಖಂಡರ ಆಕ್ರೋಶ

ನವಿಲೆ ಜಲಾಶಯ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:46 IST
Last Updated 18 ಆಗಸ್ಟ್ 2025, 5:46 IST
ಹನುಮನಗೌಡ ಬೆಳಗುರ್ಕಿ 
ಹನುಮನಗೌಡ ಬೆಳಗುರ್ಕಿ    

ಬಳ್ಳಾರಿ: ‘ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ’ ಎಂದು ರೈತ ಮುಖಂಡ ಹನುಮನ ಗೌಡ ಬೆಳಗುರ್ಕಿರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಂಗಭದ್ರಾ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿ. ಆದರೆ, ಜಲಾಶಯದಲ್ಲಿ 30 ಟಿಎಂಸಿಯಷ್ಟು ಹೂಳು ತುಂಬಿದೆ. ಇದಕ್ಕೆ ಪರ್ಯಾವಾಗಿ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಾಣವಾಗಬೇಕು. ತಕ್ಷಣಕ್ಕೆ ಜಲಾಶಯದ ಕ್ರಸ್ಟ್‌ ಗೇಟ್‌ಗಳು ಮತ್ತು ಜಲಾಶಯದ ರಿಪೇರಿ ಕಾರ್ಯ ಆಗಬೇಕು’ ಎಂದು ಅವರು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಾಧವ ರೆಡ್ಡಿ ಮಾತನಾಡಿ, ‘ನಮ್ಮ ಭಾಗಕ್ಕೆ 130 ಟಿಎಂಸಿ ನೀರು ನಿಗದಿಯಾಗಿದ್ದರೂ, ಈಗ 70 ಟಿಎಂಸಿಗೆ ನಿಲ್ಲಿಸಿದ್ದಾರೆ. ಕಿತ್ತು ಹೋಗಿರುವ ಗೇಟ್‌ ಕ್ರಸ್ಟ್‌ಗೇಟ್‌ ಅನ್ನು ಕೂಡಲೇ ಅಳವಡಿಸಬೇಕು ಎಂಬ ರೈತರ ಆಗ್ರಹಗಳ ನಡುವೆಯೇ, ಜಲಾಶಯದ ಇತರ ಗೇಟುಗಳೂ ಹಾಳಾಗಿರುವ ವಿಷಯವನ್ನು ಸಚಿವ ಶಿವರಾಜ ತಂಗಡಗಿ ಅವರೇ ಬಹಿರಂಗಪಡಿಸಿದ್ದಾರೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ’ ಎಂದರು. 

ADVERTISEMENT

‘ತುಂಗಭದ್ರಾ ಜಲಾಶಯ ಭಾಗದ ಜನಪ್ರತಿನಿಧಿಗಳು ಈ ಕೂಡಲೇ ಸರ್ಕಾರದೊಂದಿಗೆ ಮಾತನಾಡಿ ಜಲಾಶಯದ ಸಮಸ್ಯೆ ಸರಿಪಡಿಸಬೇಕು. ಈ ವಿಷಯ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇಲ್ಲವಾದರೆ, ಜನಪ್ರತಿನಿಧಿಗಳಿಗೆ ರೈತರೇ ಗತಿ ಕಾಣಿಸುವ ಕೆಲಸ ಮಾಡಲಿದ್ದಾರೆ’ ಎಂದು ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.