ADVERTISEMENT

ತುಂಗಭದ್ರೆ ಒಡಲು ಖಾಲಿ..ಖಾಲಿ; ನಾಲ್ಕು ಟಿ.ಎಂ.ಸಿ. ಅಡಿಗೆ ಇಳಿದ ನೀರಿನ ಸಂಗ್ರಹ ಮಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಏಪ್ರಿಲ್ 2019, 19:45 IST
Last Updated 19 ಏಪ್ರಿಲ್ 2019, 19:45 IST
ಬರಿದಾಗುವ ಹಂತಕ್ಕೆ ಬಂದಿರುವ ತುಂಗಭದ್ರೆಯ ಒಡಲು–ಪ್ರಜಾವಾಣಿ ಚಿತ್ರ
ಬರಿದಾಗುವ ಹಂತಕ್ಕೆ ಬಂದಿರುವ ತುಂಗಭದ್ರೆಯ ಒಡಲು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಭಾರಿ ಕಡಿಮೆಯಾಗಿದ್ದು, ಒಡಲು ಖಾಲಿ.. ಖಾಲಿ ಕಾಣಿಸುತ್ತಿದೆ.

ಏ. 19ರಂದು ಜಲಾಶಯದಲ್ಲಿ 4 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ರಾಯ, ಬಸವ ಮತ್ತು ಕೆಳಮಟ್ಟದ ಕಾಲುವೆ ಮೂಲಕ ಒಟ್ಟು 1,403 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಒಳಹರಿವು ಇಲ್ಲ.

ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲಾ ಆಡಳಿತದ ಮನವಿ ಮೇರೆಗೆ ಅಗತ್ಯ ಕುಡಿಯುವ ನೀರನ್ನು ಈಗಾಗಲೇ ಕಾಲುವೆ ಮೂಲಕ ಹರಿಸಲಾಗಿದೆ. ‘ಮೂರು ಜಿಲ್ಲೆಗಳಲ್ಲಿ ಕುಡಿಯುವ ನೀರು ಸಂಗ್ರಹ ಮಾಡಿಕೊಂಡಿರುವುದರಿಂದ ಬೇಸಿಗೆ ಮುಗಿಯುವವರೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ’ ಎನ್ನುತ್ತಾರೆ ತುಂಗಭದ್ರಾ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಬಸಪ್ಪ ಜಾನಕರ್‌.

ADVERTISEMENT

’ಸದ್ಯ ನಾಲ್ಕು ಟಿ.ಎಂ.ಸಿ. ಅಡಿ ನೀರುಜಲಾಶಯದಲ್ಲಿದೆ. ಈ ಪೈಕಿ ಸ್ವಲ್ಪ ನೀರು ಆವಿಯಿಂದ ಕಡಿಮೆಯಾಗುತ್ತದೆ. ಡೆಡ್‌ಸ್ಟೋರೆಜ್‌ ತಲುಪಿದರೂ ಜುಲೈವರೆಗೆ ಕುಡಿಯುವ ನೀರಿನ ಅಗತ್ಯ ಪೂರೈಸಲು ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ಜೂನ್‌, ಜುಲೈನಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ. ಹೀಗಾಗಿ ಈ ವರ್ಷ ಕುಡಿಯುವ ನೀರಿಗಾಗಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಬಹಳ ಕಡಿಮೆ’ ಎಂದು ಹೇಳಿದರು.

ಹಿಂದಿನ ವರ್ಷ ಜೂನ್‌ 13ರಂದು ಮುಂಗಾರು ಪ್ರವೇಶವಾಗಿತ್ತು. ಆದರೆ, ಅದಕ್ಕೂ ಮುನ್ನ ಏಪ್ರಿಲ್‌, ಮೇನಲ್ಲಿ ಅನೇಕ ಸಲಅಕಾಲಿಕ ಮಳೆ ಆಗಿದ್ದರಿಂದಜೂನ್‌ ಅಂತ್ಯಕ್ಕೆ 30 ಟಿ.ಎಂ.ಸಿ. ಅಡಿಗೂ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಆಗಸ್ಟ್‌ ವೇಳೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಒಟ್ಟು 360 ಟಿ.ಎಂ.ಸಿ. ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಈ ಪೈಕಿ 250 ಟಿ.ಎಂ.ಸಿ. ಅಡಿ ನೀರು ನದಿಗೆ ಬಿಡಲಾಗಿತ್ತು. 110 ಟಿ.ಎಂ.ಸಿ. ಅಡಿ ನೀರು ಕೃಷಿ ಮತ್ತು ಕುಡಿಯಲು ಉಪಯೋಗಿಸಲಾಗಿದೆ.

ಅಕ್ಟೋಬರ್‌ನಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಇದರಿಂದ ಎರಡನೇ ಬಾರಿ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲ. ಹೀಗಾಗಿ ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್‌.ಸಿ.) ಅಗತ್ಯಕ್ಕೆ ಅನುಗುಣವಾಗಿ ನೀರು ಹರಿಸಿರಲಿಲ್ಲ. ಪ್ರಸಕ್ತ ವರ್ಷ ಏಪ್ರಿಲ್‌ ತಿಂಗಳು ಮುಗಿಯುತ್ತ ಬಂದಿದೆ. ಆದರೆ, ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಅಕಾಲಿಕ ಮಳೆಯಾಗಿಲ್ಲ. ಮೇ ನಲ್ಲೂ ಇದೇ ಸ್ಥಿತಿಯಿದ್ದರೆ ಜಲಾಶಯ ಸಂಪೂರ್ಣ ಬರಿದಾಗಬಹುದು. ಒಂದುವೇಳೆ ಸಕಾಲಕ್ಕೆ ಮುಂಗಾರು ಆಗಮನವಾಗದಿದ್ದರೆ ಕುಡಿಯುವ ನೀರಿನ ಜತೆ ಜತೆಗೆ ಕೃಷಿಗೂ ತೊಂದರೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.