ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಒದಗಿಸುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು, ರೈತರು ಶಾಸಕ ಜೆ.ಎನ್. ಗಣೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ‘ಎರಡನೇ ಬೆಳೆಗೆ ನೀರು ಮತ್ತು ಮುಂಬರುವ ದಿನಗಳಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಕುರಿತು ಚರ್ಚಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ, ಇತರೆ ಕಾಲುವೆಗೂ ಜನವರಿ ಕೊನೆಯವರೆಗೆ ನೀರು ಹರಿಸಿದರೂ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಉಳಿಯುತ್ತದೆ. ಅದರಿಂದ ನೂತನ ಗೇಟುಗಳ ಅಳವಡಿಕೆಗೆ ತೊಂದರೆಯಾಗುವುದಿಲ್ಲ. ಅಲ್ಲದೆ, ಫೆಬ್ರುವರಿಂದ ಜುಲೈವರೆಗೆ ಗೇಟುಗಳ ಅಳವಡಿಕೆಗೆ ಕಾಲಾವಕಾಶವಿರುತ್ತದೆ. ಈ ಕುರಿತು ಐಸಿಸಿ ಸಭೆಯಲ್ಲಿ ಒತ್ತಾಯಿಸಬೇಕು’ ಎಂದು ಶಾಸಕರಲ್ಲಿ ವಿನಂತಿಸಿದರು.
ರೈತ ಪ್ರಮುಖರಾದ ಕೊನೇರು ಶ್ರೀರಾಮಕೃಷ್ಣ, ಪೋಲೂರು ಸತ್ಯನಾರಾಯಣ, ಪಿ. ಮೂಕಯ್ಯಸ್ವಾಮಿ, ಕೆ. ಶ್ರೀನಿವಾಸರಾವ್, ದರೂರು ವೀರಭದ್ರನಾಯಕ, ಮುಷ್ಟಗಟ್ಟಿ ಭೀಮನಗೌಡ, ಗೆಣಕಿಹಾಳ್ ಶರಣನಗೌಡ, ಎಮ್ಮಿಗನೂರು ರಾಜಾಸಾಬ್, ಚನ್ನಪಟ್ಟಣ ಮಂಜುಗೌಡ, ಖಾಜಾವಲಿ, ಹಂಪಾದೇವನಹಳ್ಳಿ ರಾಜಶೇಖರಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.