ADVERTISEMENT

ತುಂಗಭದ್ರಾ ಸೇತುವೆ ಗಗನಕುಸುಮ: ನೆರೆಯಿಂದ ಕಡಿತಗೊಳ್ಳುವ ಸಂಪರ್ಕ

ನೆರೆಯಿಂದ ಕಡಿತಗೊಳ್ಳುವ ಸಂಪರ್ಕ: ರಾಜ್ಯ, ಅಂತರರಾಜ್ಯ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 3:09 IST
Last Updated 11 ಆಗಸ್ಟ್ 2025, 3:09 IST
ಕಂಪ್ಲಿಯ ತುಂಗಭದ್ರಾ ನದಿ ಸೇತುವೆ ಪ್ರವಾಹ ಬಂದಾಗ ಮುಳುಗಡೆಯಾದ ದೃಶ್ಯ
ಕಂಪ್ಲಿಯ ತುಂಗಭದ್ರಾ ನದಿ ಸೇತುವೆ ಪ್ರವಾಹ ಬಂದಾಗ ಮುಳುಗಡೆಯಾದ ದೃಶ್ಯ   

ಕಂಪ್ಲಿ: ತುಂಗಭದ್ರಾ ನದಿಗೆ ನಿರ್ಮಿಸಿರುವ ಕಂಪ್ಲಿ-ಗಂಗಾವತಿ ಸೇತುವೆಗೆ ಆರು ದಶಕ ತುಂಬಿದ್ದು, ‘ಶಿಥಿಲ ಸೇತುವೆ’ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ ಕ್ಯೂಸೆಕ್ ಮೇಲ್ಪಟ್ಟು ನೀರು ಬಿಡುಗಡೆ ಮಾಡಿದರೆ ಸೇತುವೆ ಮುಳುಗಡೆಯಾಗಿ ಕಲ್ಯಾಣ ಕರ್ನಾಟಕ, ಮಧ್ಯ ಮತ್ತು ಉತ್ತರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಕನಿಷ್ಠ 10 ದಿನಗಳಿಂದ ಗರಿಷ್ಠ ಒಂದು ತಿಂಗಳವರೆಗೆ ಸಂಪರ್ಕ ಕಡಿತಗೊಳ್ಳುತ್ತದೆ. ಪ್ರತಿ ಮಳೆಗಾಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ. ಇಂಥ ಸಮಯದಲ್ಲಿ ಮಾತ್ರ ಎಲ್ಲರಿಗೂ ಹೊಸ ಸೇತುವೆ ನೆನಪಾಗುತ್ತದೆ.

ಬಳ್ಳಾರಿ, ಕಂಪ್ಲಿ-ಗಂಗಾವತಿ ಜನತೆ ತುರ್ತು ಸಂಚಾರ ಇದ್ದಲ್ಲಿ ಬುಕ್ಕಸಾಗರ ಬಳಿಯ ಕಡೆಬಾಗಿಲು ಸೇತುವೆ ಮೂಲಕ ಸುಮಾರು 35ಕಿ.ಮೀ. ಸುತ್ತಿ ತೆರಳುವುದು ಅನಿವಾರ್ಯ. 10 ಕಿ.ಮೀ. ಕ್ರಮಿಸಿ ಗುರಿ ತಲುಪಬೇಕಾದ ವಿದ್ಯಾರ್ಥಿಗಳು, ಚಿಕಿತ್ಸೆಗೆ ತೆರಳುವ ರೋಗಿಗಳು, ಕೃಷಿ ಕಾರ್ಮಿಕರು, ಪ್ರಯಾಣಿಕರು ಸಂಪರ್ಕ ಕಡಿತದಿಂದಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ.

ADVERTISEMENT

ಪ್ರವಾಹ ಸಂದರ್ಭದಲ್ಲಿ ನೀರಿನ ಜತೆಗೆ ತ್ಯಾಜ್ಯ, ಮರದ ದಿಮ್ಮಿ ಹೊಡೆತಕ್ಕೆ ಸಿಲುಕುವ ಸೇತುವೆಯ ರಕ್ಷಣಾ ಸರಳು ಹಾಳಾಗಿ ಇತ್ತೀಚೆಗೆ ಇನ್ನಷ್ಟು ದುರ್ಬಲವಾಗಿದೆ. ಪ್ರತಿ ಬಾರಿ ನದಿ ತುಂಬಿ ಹರಿದು ಸೇತುವೆ ಮೇಲಿನ ನೀರು ಇಳಿಮುಖವಾದ ಬಳಿಕ ಲೋಕೋಪಯೋಗಿ ಇಲಾಖೆಯವರು ಸೇತುವೆ ಮೇಲಿನ ಸಿಮೆಂಟ್ ಲೇಪನ, ಕಬ್ಬಿಣ ಸರಳು ಸೇರಿದಂತೆ ಇತರೆ ಕಾಮಗಾರಿಗಳ ತಾತ್ಕಾಲಿಕ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ.

ದಿನದಿಂದ ದಿನಕ್ಕೆ ‘ಬಲಹೀನ’ವಾಗುತ್ತಿರುವ ಸೇತುವೆ ದುರಸ್ತಿಯಲ್ಲಿಯೇ ಕಾಲ ತಳ್ಳುತ್ತಿದೆ. ಅವಘಡ ಸಂಭವಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂಬುದು ಜನರ ಆಗ್ರಹ.

2025ರ ಜೂನ್‌ 16ರಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೇತುವೆ ವೀಕ್ಷಿಸಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಕುರಿತು ಯಾವುದೇ ಪ್ರಕ್ರಿಯೆ ಶುರುವಾಗಿಲ್ಲ.

ಕವಡೆ ಕಾಸಿನ ಕಿಮ್ಮತ್ತಿಲ್ಲ: ನೂತನ ಸೇತುವೆ ನಿರ್ಮಿಸಬೇಕು ಎಂದು ದಶಕಗಳಿಂದ ಪಟ್ಟಣದ ವಿವಿಧ ಪ್ರಗತಿಪರ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಇನ್ನೇನು ಸೇತುವೆ ನಿರ್ಮಾಣವಾಗಿಯೇ ಬಿಡುತ್ತದೆ ಎಂಬ ಹೇಳಿಕೆಗಳು ಕೇಳಿ ಬಂದಿದ್ದವು. ಕ್ರಮೇಣ ಇದು ಕೇವಲ ಗಾಳಿ ಗುದ್ದಾಟ ಎಂದು ಜನರು ಮಾತನಾಡಿಕೊಂಡರು. ಇದಾದ ಬಳಿಕ ಹೋರಾಟಗಳು ಮುಂದುವರಿದ್ದರೂ‌ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವ ಆರೋಪ ಇಲ್ಲಿ ಸಾಮಾನ್ಯವಾಗಿದೆ. 

ಕಂಪ್ಲಿಯ ತುಂಗಭದ್ರಾ ನದಿ ಸೇತುವೆ ಮೇಲೆ ವಾಹನಗಳ ಸಂಚಾರದ ದೃಶ್ಯ

ಯಾರು ಏನಂತಾರೆ? 

 ನಬಾರ್ಡ್‌ನಿಂದ ಅನುದಾನ ಭರವಸೆ  ಕಂಪ್ಲಿ ತುಂಗಭದ್ರಾ ನದಿ ನೂತನ ಸೇತುವೆ ನಿರ್ಮಿಸುವ ಕುರಿತಂತೆ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ನಬಾರ್ಡ್‍ನಿಂದ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ಸಿಕ್ಕಿದೆ.

-ಜೆ.ಎನ್. ಗಣೇಶ್. ಕಂಪ್ಲಿ ಶಾಸಕ

ಸರ್ಕಾರಕ್ಕೆ ಪ್ರಸ್ತಾವ  ಲೋಕೋಪಯೋಗಿ ಇಲಾಖೆ ಸಚಿವರು ಈಚೆಗೆ ಸೇತುವೆ ವೀಕ್ಷಿಸಿದ್ದಾರೆ. ಜತೆಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಿಂದ‌ ಹೊಸ ಸೇತುವೆ ನಿರ್ಮಾಣಕ್ಕೆ ಪರಿಷ್ಕೃತ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

-ಜೆ. ವಿಶ್ವನಾಥ ಎಇಇ ಪಿಡಬ್ಲ್ಯುಡಿ

ಗಂಗಾವತಿ  ರಸ್ತೆ ರೈಲು ಸೇತುವೆ ನಿರ್ಮಿಸಿ  ಆಂಧ್ರಪ್ರದೇಶದ ಗೋದಾವರಿಯಲ್ಲಿ ನಿರ್ಮಿಸಿರುವ ರಸ್ತೆ ಮತ್ತು ರೈಲು ಸೇತುವೆ (ರಾಜಮಂಡ್ರಿ ಕಮಾನು ಬ್ರಿಡ್ಜ್) ಮಾದರಿಯಲ್ಲಿ ಕಂಪ್ಲಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಬೇಕು. ಈಗಾಗಲೇ ಸಮೀಕ್ಷೆಯಾಗಿರುವ ಗಂಗಾವತಿ-ಕಂಪ್ಲಿ-ದರೋಜಿ ರೈಲ್ವೆ ಸಂಪರ್ಕಕ್ಕೆ ಮತ್ತು  ವಾಹನ ಸಂಚಾರಕ್ಕೆ ಈ ಮಾದರಿ ಬ್ರಿಡ್ಜ್ ಭವಿಷ್ಯದಲ್ಲಿ ಅನುಕೂಲವಾಗಲಿದೆ.

-ಕೆ.ಎಂ. ಹೇಮಯ್ಯಸ್ವಾಮಿ ಕಂಪ್ಲಿ

ತಾಲ್ಲೂಕು ರೈಲ್ವೆ ಮಾರ್ಗ ಕ್ರಿಯಾ ಸಮಿತಿ ಅಧ್ಯಕ್ಷ  ಹಲವು ಹೋರಾಟ  ಕಂಪ್ಲಿ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸುವಂತೆ ಪಟ್ಟಣ ಬಂದ್ ಮಾಡಿ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇವೆ. ಜತೆಗೆ ಹಲವು ಬಾರಿ ಮನವಿಯನ್ನೂ ಸಲ್ಲಿಸಿದ್ದೇವೆ.

-ಜಿ.ಜಿ. ಚಂದ್ರಣ್ಣ

ಕಂಪ್ಲಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ(ಪಕ್ಷಾತೀತ) ಅಧ್ಯಕ್ಷ  ಕೃಷಿ ಚಟುವಟಿಕೆಗೂ ಹಿನ್ನಡೆ ತುಂಗಭದ್ರಾ ನದಿ ಸೇತುವೆ ಆಚೆ (ಚಿಕ್ಕಜಂತಕಲ್ಲು) ಮಾಗಾಣಿಯಲ್ಲಿ ಭತ್ತ ಬಾಳೆ ಬೆಳೆಯುತ್ತಿದ್ದೇವೆ. ನದಿ ಪ್ರವಾಹ ಬಂದಾಗಲೆಲ್ಲ 10ರಿಂದ 20ದಿನ ಸಂಚಾರ ಸ್ಥಗಿತವಾಗಿ ಗದ್ದೆಗಳ ನಿರ್ವಹಣೆಗೆ ಹಿನ್ನಡೆಯಾಗಿ ನಷ್ಟ ಅನುಭವಿಸುತ್ತಿದ್ದೇವೆ. ಇದಕ್ಕೆಲ್ಲ ನೂತನ ಸೇತುವೆ ನಿರ್ಮಾಣವೇ ಪರಿಹಾರ.

-ಕೋಟೆಮ್ಯಾಗಳ ನಾಗರಾಜ ಕಂಪ್ಲಿ

ಕೋಟೆಯ ರೈತ ಸಕಾಲಕ್ಕೆ ಶಾಲೆಗೆ ಹೋಗಲು ಆಗುತ್ತಿಲ್ಲ  ನದಿ ಸಂಪರ್ಕ ಕಡಿತಗೊಂಡಾಗ ಕಂಪ್ಲಿಯಿಂದ ಗಂಗಾವತಿ ನಗರದ ‌ಶಾಲಾ–ಕಾಲೇಜುಗಳಿಗೆ ತೆರಳಲು ಸುತ್ತಿಬಳಸಿ ಹೋಗಬೇಕು. ಈ ವೇಳೆ ತರಗತಿಗಳಿಗೆ ಸಕಾಲಕ್ಕೆ ತೆರಳಲಾಗದೇ ವಿದ್ಯಾಭ್ಯಾಸ ಕುಂಠಿತಗೊಳ್ಳುವ ಆತಂಕವಿದೆ.

-ಇಮಾನ್ಯೂಯಲ್‌, ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿ

ಸೇತುವೆ ಇತಿಹಾಸ

ಕಂಪ್ಲಿ ತುಂಗಭದ್ರಾ ನದಿಗೆ 1959ರ ಫೆಬ್ರುವರಿ 17ರಂದು ಸೇತುವೆ ನಿರ್ಮಾಣಕ್ಕೆ ಅಂದಿನ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಎಂ. ಚನ್ನಬಸಪ್ಪ ಭೂಮಿಪೂಜೆ ನೆರವೇರಿಸಿದ್ದರು. 1961ರ ಜುಲೈನಲ್ಲಿ ಮೈಸೂರು ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಕೆ. ವೀರಣ್ಣಗೌಡ ಸೇತುವೆ ಉದ್ಘಾಟಿಸಿದ್ದರು. ರಾಜ್ಯ ಹೆದ್ದಾರಿ-29ರ 80.400 ಕಿ.ಮೀ.ನಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಸೇತುವೆ ಉದ್ದ 1934 ಅಡಿ ಅಗಲ 22ಅಡಿ ಒಟ್ಟು 51 ನೀರಿನ ದಾರಿ(ಕಮಾನು)ಗಳನ್ನು ಹೊಂದಿದೆ. 

ಸಾಮರ್ಥ್ಯ ಮೀರಿ ಸರಕು ಸಾಗಾಣೆ

ಕೆಲ ವರ್ಷಗಳಿಂದ ಜಿಲ್ಲೆಯ ಉಕ್ಕಿನ ಕಾರ್ಖಾನೆಗಳಿಗೆ ಈ ಸೇತುವೆ ಮೂಲಕವೇ ಲಾರಿಗಳು ಸಾಮಾಗ್ರಿಗಳನ್ನು ಸಾಗಿಸುತ್ತಿವೆ. ಸೇತುವೆ ಮೇಲೆ 15 ಟನ್‌ನಷ್ಟು ಭಾರ ಸಾಗಿಸಬಹುದೆಂದು ಸೂಚನಾಫಲಕ ಅಳವಡಿಸಲಾಗಿದೆ. ಆದರೆ ನಿಯಮ ಉಲ್ಲಂಘಿಸುವ ಸರಕು ಲಾರಿಗಳು ಮಿತಿ ಮೀರಿ ಸಾಮಗ್ರಿ ಸಾಗಣೆ ಮಾಡುತ್ತಿರುವುದರಿಂದ ಸೇತುವೆ ಶಿಥಿಲವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.