ADVERTISEMENT

ತುಂಗಭದ್ರೆ ಹಸಿರಾಗಿಸಿದ ‘ಸಯಾನೋ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 15:04 IST
Last Updated 27 ಆಗಸ್ಟ್ 2021, 15:04 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದೆ   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ನೀರು ಈ ವರ್ಷವೂ ಹಸಿರು ಬಣ್ಣಕ್ಕೆ ತಿರುಗಿದೆ.

ಆದರೆ, ಈ ವರ್ಷ ಅವಧಿಗೂ ಮುನ್ನವೇ ಹಸಿರಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ ಅಂತ್ಯದಿಂದ ಅಕ್ಟೋಬರ್‌ ವರೆಗೆ ಪ್ರತಿವರ್ಷ ಇಡೀ ಜಲಾಶಯದ ನೀರು ಹಸಿರಾಗುತ್ತದೆ.

ಸಯಾನೋ ಬ್ಯಾಕ್ಟೀರಿಯಾಗಳು (ಬ್ಲೂ ಗ್ರೀನ್ ಅಲ್ಗಿ) ಇಡೀ ಜಲಾಶಯವನ್ನು ಆಕ್ರಮಿಸಿಕೊಂಡು ನೀರನ್ನು ಹಸಿರಾಗಿಸುತ್ತವೆ. ಜಲಾನಯನ ಪ್ರದೇಶದ ಕೃಷಿ ಭೂಮಿಯಲ್ಲಿ ರಸಗೊಬ್ಬರಗಳ ಹೆಚ್ಚಿನ ಬಳಕೆ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರು ನೇರವಾಗಿ ನದಿಗೆ ಹರಿದು ಬರುವುದರಿಂದ ಸಯಾನೋ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ.

ADVERTISEMENT

‘ರಸಗೊಬ್ಬರಗಳಲ್ಲಿನ ರಂಜಕ, ಗಂಧಕ, ಸಾರಜನಕ ಹಾಗೂ ಕೈಗಾರಿಕೆಗಳ ತ್ಯಾಜ್ಯದಿಂದ ಸಯಾನೋ ಬ್ಯಾಕ್ಟಿರಿಯಾ ಹುಟ್ಟುಕೊಳ್ಳುತ್ತದೆ. ಮೋಡ ಕವಿದ ವಾತಾವರಣದ ನಡುವೆ ಆಗಾಗ ಬಿರು ಬಿಸಿಲಿನಿಂದ ಅದರ ಉತ್ಪತ್ತಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಈ ನೀರನ್ನು ಜನ, ಜಾನುವಾರು, ಪಕ್ಷಿಗಳು ನೇರವಾಗಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೀರಿಗಿಳಿದರೆ ಚರ್ಮರೋಗವೂ ತಗುಲಬಹುದು’ ಎಂದು ಪರಿಸರ, ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು ತಿಳಿಸಿದರು.

‘ನೈಸರ್ಗಿಕವಾಗಿ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಸಯಾನೋ ಬ್ಯಾಕ್ಟೀರಿಯಾ ಉತ್ಪತ್ತಿಯಿಂದ ನಿಗದಿತ ಅವಧಿಗಿಂತ ಹೆಚ್ಚಿನ ಮಟ್ಟದಲ್ಲಿ ಹೂಳು ಜಲಾಶಯದಲ್ಲಿ ಶೇಖರಣೆಯಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.