ಉಜ್ಜಿನಿ ಗ್ರಾಮದ ಮುಖ್ಯರಸ್ತೆಯ ಚರಂಡಿಯ ದುಸ್ಥಿತಿ
ಕೊಟ್ಟೂರು: ಪಂಚ ಪೀಠಗಳಲ್ಲಿ ಒಂದಾದ ಉಜ್ಜಯಿನಿ ಗ್ರಾಮದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ನಿತ್ಯವೂ ಮರುಳಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸುವ ಅಸಂಖ್ಯಾತ ಭಕ್ತರಿಗೆ ತ್ಯಾಜ್ಯ ಹಾಗೂ ತಗ್ಗುಗುಂಡಿಗಳಿರುವ ರಸ್ತೆಗಳು ಹಾಗೂ ತಿಪ್ಪೇಗುಂಡಿಗಳ ಸಾಲು ಸ್ವಾಗತ ಕೋರುವಂತಿದೆ.
ಒಳ ಚರಂಡಿ ಕಾಣದ ಗ್ರಾಮದಲ್ಲಿ ಹಗಲು ವೇಳೆಯೇ ಸೊಳ್ಳೆಗಳ ಕಾಟಕ್ಕೆ ಜನತೆ ಬೇಸತ್ತು ಹೋಗಿದ್ದಾರೆ. ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಆವೃತ್ತವಾಗಿರುವ ಬಹುತೇಕ ಚರಂಡಿಗಳು ಹಾಗೂ ರಸ್ತೆಗಳು ಸ್ವಚ್ಚತೆ ಹಾಗೂ ದುರಸ್ಥಿ ಕಾಣದೇ ವರ್ಷಗಳಾದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೇ ಜಾಣ ಕುರುಡುತನದಿಂದ ವರ್ತಿಸುವುದನ್ನು ನೋಡಿ ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರ ಗೋಳು ಹೇಳುವಂತಿಲ್ಲ. ಕಿರಿದಾದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ದೇವಸ್ಥಾನಕ್ಕೆ ತೆರಳುವ ಭಕ್ತರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದಾವಣಗೆರೆ ಭಕ್ತ ಸಿದ್ದೇಶ ಹೇಳುತ್ತಾರೆ.
ರಥೋತ್ಸವ, ತೈಲಾಭಿಷೇಕ ಹಾಗೂ ಕಾರ್ತಿಕೋತ್ಸವ ಸಂದರ್ಭಗಳಲ್ಲಿ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಹಾಗೂ ಗಣ್ಯರು ಆಗಮಿಸುತ್ತಿದ್ದರೂ ಮೂಲ ಸೌಕರ್ಯಗಳನ್ನು ಕಲ್ಪಿಸದ ಗ್ರಾಮ ಪಂಚಾಯ್ತಿ ಆಡಳಿತದ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
’ಸುಸಜ್ಜಿತ ಸಂತೆ ಮೈದಾನ, ಬಸ್, ಅಟೊ ನಿಲ್ದಾಣ ಹಾಗೂ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕೊರತೆ ಎದ್ದು ಕಾಣುತ್ತಿದ್ದರೂ ಶಾಸಕರು ಗಮನ ಹರಿಸದೇ ಇರುವುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ’ ಎಂದು ಗ್ರಾಮದ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
’ಉಜ್ಜಿನಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಇದುವರೆಗೂ ಕಾರ್ಯಗತಗೊಳಿಸದಿರುವುದು ಬೇಸರದ ಸಂಗತಿ’ ಹಿರಿಯ ನಾಗರಿಕರ ವೇದಿಕೆಯ ಮುಖ್ಯಸ್ಥ ಎ.ಎಂ.ಚನ್ನವೀರಸ್ವಾಮಿ ಅಸಮದಾನ ವ್ಯಕ್ತಪಡಿಸಿದರು.
ಮೂಲ ಸೌಕರ್ಯಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ದೂರವಾಣಿ ಮೂಲಕ ಪತ್ರಿಕೆ ಸಂಪರ್ಕಿಸಿದಾಗ ಕರೆಯನ್ನು ಸ್ವೀಕರಿಸಲಿಲ್ಲ.
ಜುಲೈ 29 ರಂದು ಮಂಗಳವಾರ ಗ್ರಾಮದಲ್ಲಿ ನಡೆಯಲಿರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗುವರೇ ಎಂದು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.