ಬಳ್ಳಾರಿ: ರೈತರಿಗೆ ಸಮರ್ಪಕವಾಗಿ ಯೂರಿಯಾ ಒದಗಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ರೈತ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಬಳಿಗೆ ಬಂದು ತಲುಪಿತು.
ಯೂರಿಯಾ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ, ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾದ ನಾಯಕರು ಆರೋಪಿಸಿದರು. ಬಳಿಕ ಮನವಿಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಅವರಿಗೆ ಸಲ್ಲಿಸಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ‘ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಯೂರಿಯಾ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುತ್ತಿದೆ. ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ರೈತರಿಗೆ ಪೂರಕವಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದು ಮಾಡಲಾಗಿದೆ. ರೈತರ ಸಮಸ್ಯೆ ನೀಗಿಸದೇ ಹೋದರೆ ನಾವು ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
‘8 ಲಕ್ಷ ಟನ್ ಗೊಬ್ಬರನ್ನು ರಾಜ್ಯಕ್ಕೆ ಪೂರೈಸಿರುವುದಾಗಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ. ಆದರೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಜಿಂದಾಲ್ ಕಾರ್ಖಾನೆ ಬಂದಾಗಿನಿಂದ ನಮಗೆ ರೈಲುಗಳು ಸಿಗುತ್ತಿಲ್ಲ. ಜಿಂದಾಲ್ ರೈಲುಗಳ ಸಂಚಾರದಿಂದಾಗಿ ಗೊಬ್ಬರ ತರುವ ಸರಕು ರೈಲುಗಳು ಬಳ್ಳಾರಿಗೆ ಬರುತ್ತಿಲ್ಲ’ ಎಂದು ಅವರು ಆರೋಪಿಸಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಅನೀಲ್ ಕುಮಾರ್ ಮೋಕಾ, ರೈತ ಮೋರ್ಚಾ ಮುಖಂಡ ಗುರುಲಿಂಗನಗೌಡ, ಹನುಮಂತಪ್ಪ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.