ADVERTISEMENT

ರಮೇಶ ಜಾರಕಿಹೊಳಿ ಕುರಿತು ಆನಂದ್‌ ಸಿಂಗ್‌ ಅಳಿಯನ ಪೋಸ್ಟ್: ವಾಲ್ಮೀಕಿ ಸಮಾಜ ಆಕ್ರೋಶ

ಸಂದೀಪ್‌ ಸಿಂಗ್‌ ನಡೆಗೆ ತೀವ್ರ ಅಸಮಾಧಾನ; ಹೊಸಪೇಟೆ ಬಂದ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 7:08 IST
Last Updated 2 ಸೆಪ್ಟೆಂಬರ್ 2021, 7:08 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ    

ಹೊಸಪೇಟೆ (ವಿಜಯನಗರ): ಶಾಸಕ ರಮೇಶ ಜಾರಕಿಹೊಳಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಿಂಗಳಿಂದ ಪೋಸ್ಟ್‌ ಮಾಡುತ್ತಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸೋದರ ಅಳಿಯ ಸಂದೀಪ್‌ ಸಿಂಗ್‌ ನಡೆಗೆ ವಾಲ್ಮೀಕಿ ಸಮಾಜ ತೀವ್ರ ಆಕ್ರೋಶಗೊಂಡಿದೆ.

ಈ ಬಗ್ಗೆ ಸಮಾಜದ ಅನೇಕರು ಈ ಹಿಂದೆಯೇ ನೇರವಾಗಿ ಸಂದೀಪ್‌ ಸಿಂಗ್‌ ಅವರಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಸಂದೀಪ್‌ ಸಿಂಗ್ ಪೋಸ್ಟ್‌ ಮಾಡುವುದು ನಿಲ್ಲಿಸಿರಲಿಲ್ಲ. ಇದರಿಂದಾಗಿ ಒಳಗೊಳಗೆ ಕುದಿಯುತ್ತಿದ್ದ ಸಮಾಜದವರು ಈಗ ಬಹಿರಂಗವಾಗಿ ಹೊರಗೆ ಬಂದಿದ್ದಾರೆ.

ಸಂದೀಪ್‌ ಸಿಂಗ್‌ ಬಗ್ಗೆ ನಗರದ ಏಳು ಕೇರಿಗಳಲ್ಲಿ ಅನೇಕ ದಿನಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಈ ಚರ್ಚೆ ಸಮಾಜದ ಯುವಕರಿಗಷ್ಟೇ ಸೀಮಿತವಾಗಿತ್ತು. ಮಂಗಳವಾರ ಶಿವರಾಮ ಎನ್ನುವವರು ಸಂದೀಪ್‌ಗೆ ಕರೆ ಮಾಡಿ, ಪೋಸ್ಟ್‌ ಮಾಡದಂತೆ ಆಕ್ಷೇಪ ಮಾಡಿದ್ದರು. ಈ ವಿಚಾರವನ್ನು ಸಂದೀಪ್‌ ಅವರು, ಪಟ್ಟಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಶ್ರೀನಿವಾಸ್‌ ಅವರ ಗಮನಕ್ಕೆ ತಂದಿದ್ದರು. ಅವರು ಶಿವರಾಮ ಅವರನ್ನು ಠಾಣೆಗೆ ಕರೆಸಿ, ಮಾಹಿತಿ ಪಡೆದು ಕಳಿಸಿದ್ದರು. ಈ ವೇಳೆ ಅನೇಕ ಯುವಕರು ಠಾಣೆಗೆ ಬಂದಿದ್ದರು.

ADVERTISEMENT

ಶಿವರಾಮ ಅವರನ್ನು ಠಾಣೆಗೆ ಕರೆಸಿದ್ದಕ್ಕೆ ತೀವ್ರ ಸಿಟ್ಟಿಗಾದ ಸಮಾಜದ ಯುವಕರು, ‘ಬುಧವಾರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರಬೇಕು. ಇಲ್ಲವಾದಲ್ಲಿ ಯುವಕರೇ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದರು. ಅದರಿಂದಾಗಿ ಬುಧವಾರ ಸಂಜೆ ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಗುಜ್ಜಲ್‌ ಶಿವರಾಮಪ್ಪ ಅವರ ನೇತೃತ್ವದಲ್ಲಿ ಸಭೆ ಸೇರಿದ್ದರು.

‘ಸಂದೀಪ್‌ ಸಿಂಗ್‌ ಅವರು ಸತತವಾಗಿ ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡುತ್ತಿದ್ದಾರೆ. ಇದು ರಮೇಶ ಅವರಿಗೆ ಮಾಡುತ್ತಿರುವ ಅಪಮಾನವಲ್ಲ. ಇಡೀ ಸಮಾಜದ ಅವಮಾನ. ಕೂಡಲೇ ಅವರು ಕ್ಷಮೆ ಕೇಳಬೇಕು. ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸಬೇಕು. ವೈಯಕ್ತಿಕ ಸ್ವಾರ್ಥಕ್ಕಾಗಿ ಕೆಲವರು ಸಮಾಜವನ್ನು ಬಲಿಪಶು ಮಾಡುತ್ತಿದ್ದಾರೆ. ಅಂತಹವರನ್ನು ದೂರ ಇಡಬೇಕು’ ಎಂದು ಹಲವು ಮುಖಂಡರು ಸಭೆಯಲ್ಲಿ ಹಕ್ಕೊತ್ತಾಯ ಮಾಡಿದರು.

ಎಲ್ಲರ ಸಮ್ಮತಿ ಮೇರೆಗೆ ಕಾನೂನು ಹೋರಾಟ ನಡೆಸುವ ತೀರ್ಮಾನಕ್ಕೆ ಬರಲಾಯಿತು.
ಬಳಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮೂನ್ನೂರಕ್ಕೂ ಹೆಚ್ಚು ಜನ ನೇರವಾಗಿ ಪಟ್ಟಣ ಠಾಣೆಗೆ ಬಂದರು. ‘ಸಂದೀಪ್‌ ಅವರನ್ನು ತಕ್ಷಣವೇ ಠಾಣೆಗೆ ಕರೆಸಿ, ವಿಷಯ ಇತ್ಯರ್ಥಪಡಿಸಬೇಕು’ ಎಂದು ಆಗ್ರಹಿಸಿದರು. ‘ಸ್ವಲ್ಪ ಕಾಲಾವಕಾಶ ಕೊಡಬೇಕು. ಬಳಿಕ ಮುಂದುವರೆಯಿರಿ’ ಎಂದು ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ ತಿಳಿಸಿದರು.

‘ಎರಡು ದಿನದೊಳಗೆ ಸಂದೀಪ್‌ ಸಿಂಗ್‌ರನ್ನು ಕರೆಸಬೇಕು. ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ದೂರು ಕೊಟ್ಟು ಕಾನೂನು ಹೋರಾಟ ನಡೆಸಲಾಗುವುದು’ ಎಂದು ವಾಲ್ಮೀಕಿ ಸಮಾಜದ ತಾಲ್ಲೂಕು ಉಪಾಧ್ಯಕ್ಷ ನಾಣಿಕೆರೆ ತಿಮ್ಮಯ್ಯನವರು ಗಡುವು ವಿಧಿಸಿ ಸಮಾಜದ ಜನರೊಂದಿಗೆ ಠಾಣೆಯಿಂದ ನಿರ್ಗಮಿಸಿದರು.

ಮುಖಂಡರಾದ ಗೋಸಲ ಭರಮಪ್ಪ, ಗುಜ್ಜಲ್‌ ನಾಗರಾಜ್‌, ಭರಮಣ್ಣ, ಜಂಬಾನಹಳ್ಳಿ ವಸಂತ, ಸಣ್ಣಕ್ಕಿ ರುದ್ರಪ್ಪ ಸೇರಿದಂತೆ ಮೊದಲಾದವರು ಇದ್ದರು.

ಸಚಿವ ಆನಂದ್‌ ಸಿಂಗ್‌ ಅವರ ಸೋದರ ಅಳಿಯ ಸಂದೀಪ್‌ ಸಿಂಗ್‌ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ವಾಲ್ಮೀಕಿ ಸಮಾಜದ ನೂರಾರು ಜನ ಬುಧವಾರ ರಾತ್ರಿ ಹೊಸಪೇಟೆಯ ಪಟ್ಟಣ ಪೊಲೀಸ್‌ ಠಾಣೆ ಎದುರು ಸೇರಿದ್ದರು–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.