
ಬಳ್ಳಾರಿ: ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮೇಲೆ ಪ್ರಕರಣಗಳಿವೆ. ಜೈಲು ಪಾಲಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ. ಹಾಗಾದರೆ ಜನಾರ್ದನ ರೆಡ್ಡಿ ಮೇಲೆ ಯಾವುದೇ ಪ್ರಕರಣಗಳು ಇಲ್ಲವೇ, ನೀವು ಜೈಲಿಗೆ ಹೋಗಿ ಬಂದಿಲ್ಲವೇ ಎಂದು ವಾಲ್ಮೀಕಿ ಸಮುದಾಯದ ಯರಗುಡಿ ಮುದಿಮಲ್ಲಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜನಾರ್ದನ ರೆಡ್ಡಿಗೆ ನಾಗೇಂದ್ರ
ಅವರು ಬೇಕಾಗಿತ್ತು. ಈಗ ಬೇರೆ ಪಕ್ಷದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ
ಮಾತನಾಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಒಬ್ಬ ನಾಯಕನನ್ನು ಬೈದರೆ ನಾವು
ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.
‘ನಾಗೇಂದ್ರ ಅವರನ್ನು ರೌಡಿ, ಕ್ರಿಮಿನಲ್ ಎಂದು ಸಂಬೋಧನೆ ಮಾಡಿರುವ ಜನಾರ್ದನರೆಡ್ಡಿ ಅವರು ಸಮಯಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ’ ಎಂದರು.
‘ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿದ್ದವರು. ಜನರ ಪ್ರೀತಿ ಇಲ್ಲದಿದ್ದರೆ ನಾಲ್ಕು ಬಾರಿ ಶಾಸಕರಾಗಲು ಸಾಧ್ಯವೇ ? ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಸಹೋದರ ಸೋಮಶೇಖರ ರೆಡ್ಡಿಯನ್ನೇ ನೀವು ಸೋಲಿಸಿದಿರಿ. ಸಮಯ ಬಂದಾಗ
ಸ್ವಾರ್ಥ ರಾಜಕಾರಣ ಮಾಡುತ್ತೀರಿ. ವಾಲ್ಮೀಕಿ ಸಮಾಜವನ್ನು ನಿಮಗೆ ಕಷ್ಟಕ್ಕೆ ಮಾತ್ರ
ಬಳಸಿಕೊಳ್ಳುತ್ತೀರಿ. ಈ ಹಿಂದೆ ನಾಗೇಂದ್ರ ಅವರು ನಿಮ್ಮ ಜೊತೆ ಇದ್ದಾಗ ರೌಡಿ ಎಂದು
ಗೊತ್ತಿರಲಿಲ್ಲವೇ ? ಈಗ ಗೊತ್ತಾಯಿತೇ ಎಂದು ಕೇಳಿದರಲ್ಲದೆ, ಇನ್ನು ಮುಂದೆ ನಾಗೇಂದ್ರ
ಅವರ ಬಗ್ಗೆ ಮಾತನಾಡಿದರೆ ವಾಲ್ಮೀಕಿ ಸಮುದಾಯ ಸುಮ್ಮನಿರುವುದಿಲ್ಲ ಎಂದು
ಎಚ್ಚರಿಸಿದರು.
ಪಕ್ಷದ ಮುಖಂಡರಾದ ಜಗನ್, ರಾಮ್ ಪ್ರಸಾದ್, ಪರುಶುರಾಮ್, ವಿಜಯಕುಮಾರ್
ಸಂಗನಕಲ್ಲು ಮತ್ತಿತರರಿದ್ದರು.