ADVERTISEMENT

ಬಳ್ಳಾರಿ | ವಾಲ್ಮೀಕಿ ಕಾರ್ಯಕ್ರಮದ ಬಳಿಕ ಉತ್ತರ: ನಾರಾ ಭರತ್‌ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 1:54 IST
Last Updated 21 ಜನವರಿ 2026, 1:54 IST
ಭರತ್‌ ರೆಡ್ಡಿ 
ಭರತ್‌ ರೆಡ್ಡಿ    

ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಕಾರ್ಯಕ್ರಮ ಆದ ಬಳಿಕ ಎಲ್ಲರಿಗೂ, ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಸವಾಲುಗಳು ಲೆಕ್ಕಕ್ಕೆ ಇಡುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ  ಭರತ್‌ ರೆಡ್ಡಿ ಹೇಳಿದ್ದಾರೆ. 

ನಗರದ 2ನೇ ವಾರ್ಡ್‌ಗೆ ಮಂಗಳವಾರ ಭೇಟಿ ನೀಡಿದ್ದ ಅವರು, ಜನರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 

‘2ನೇ ವಾರ್ಡ್‌ಗೆ ಮೂರರಿಂದ ಮೂರುವರೆ ಕೋಟಿ ರೂಪಾಯಿ ಅನುದಾನ ನಿಗದಿ ಮಾಡಿದ್ದೇವೆ. ಅದರಲ್ಲಿ ಯಾವ ಕೆಲಸ ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಪರಿಶೀಲಿಸುತ್ತಿದ್ದೇನೆ. ಇಲ್ಲಿ ಒಳಚರಂಡಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳನ್ನು ಜನರಿಂದಲೇ ತಿಳಿದುಕೊಂಡು ಯೋಜನೆಯನ್ನು ಯಾವ ರೀತಿ ಜಾರಿಗೆ ತರಬೇಕು ಎಂಬುದನ್ನು ತೀರ್ಮಾನಿಸುತ್ತೇನೆ’ ಎಂದು ಹೇಳಿದರು.  

ADVERTISEMENT

ಬಜೆಟ್‌ನಲ್ಲಿ ಬಳ್ಳಾರಿ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ, ‘ಕೆಎಂಇಆರ್‌ಸಿಯಲ್ಲಿ ಈಗಾಗಲೇ ನೀರು, ರಸ್ತೆಗೆ ಸಂಬಂಧಿಸಿ ಯೋಜನೆಗಳನ್ನು ಪಡೆದುಕೊಂಡಿದ್ದೇವೆ. ಬಜೆಟ್‌ನಲ್ಲಿ ಬಳ್ಳಾರಿಗೆ ಕಾನೂನು ಕಾಲೇಜು ಕೇಳಿದ್ದೇವೆ. ಕಂಪ್ಲಿ ಮತ್ತು ಬಳ್ಳಾರಿಗೆ ಸೇರಿ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜು ಕೇಳಿದ್ದೇವೆ. ಬಳ್ಳಾರಿಯಲ್ಲಿ ಈಗಾಗಲೇ ಎಂಜಿನಿಯರಿಂಗ್‌ ಕಾಲೇಜುಗಳು ಇರುವುದರಿಂದ ಗ್ರಾಮೀಣ ಪ್ರದೇಶಕ್ಕೂ ಅನುಕೂಲವಾಗುವಂತೆ ಎರಡೂ ತಾಲ್ಲೂಕಿನ ನಡುವೆ ಎಂಜಿನಿಯರಿಂಗ್ ಕಾಲೇಜು ಬೇಕು ಎಂದು ಹೇಳಿದ್ದೇವೆ’ ಎಂದರು.  

ಬಿಜೆಪಿ ನಾಯಕರು ಇತ್ತೀಚೆಗೆ ನಡೆಸಿದ ಸಮಾವೇಶ, ಅದರಲ್ಲಿ ನಾಯಕರು ಆಡಿದ ಮಾತುಗಳು, ಭರತ್‌ ರೆಡ್ಡಿ ಬೆಂಬಲಿಗರು ಡ್ರಗ್ಸ್‌ ದಂದೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳ ಕುರಿತ ಪ್ರಶ್ನೆಗೆ ‘ವಾಲ್ಮೀಕಿ ಕಾರ್ಯಕ್ರಮ ಆದ ಬಳಿಕ ಎಲ್ಲರಿಗೂ, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅವರು ಹಾಕಿದ ಸವಾಲುಗಳು ಲೆಕ್ಕಕ್ಕೆ ಇಲ್ಲ’ ಎಂದರು. 

ಬಳ್ಳಾರಿಯಲ್ಲೇ ಸಮ್ಮೇಳನ  ಕನ್ನಡ ಸಾಹಿತ್ಯ ಸಮ್ಮೇಳವನ್ನು ಬಳ್ಳಾರಿಯ ಜಿಲ್ಲೆಯ ಶಾಸಕರು ಒತ್ತಾಯ ಮಾಡಿ ತೆಗೆದುಕೊಂಡು ಬಂದಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಮೇಲೆ ಅಕ್ರಮದ ಆರೋಪಗಳು ಕೇಳಿ ಬಂದಿವೆ. ಇದೇ ವಿಚಾರ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ. ಈ ಕಾರಣಕ್ಕೆ ಸಮ್ಮೇಳನ ವಿಳಂಬವಾಗಿದೆ. ಅದೇನೇ ಇದ್ದರೂ ಬಳ್ಳಾರಿಯಲ್ಲೇ ಸಮ್ಮೇಳನ ನಡೆಯುವುದು ಶತಃಸಿದ್ಧ ಎಂದು ನಾರಾ ಭರತ್‌ ರೆಡ್ಡಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.