
ಹರಪನಹಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಇತಿಹಾಸ ಪ್ರಸಿದ್ದ ಸಾರಿ ಬಯಲು ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿ ಪರಾಕಾಷ್ಠೆ ಮೆರೆದರು.
ಬೆಳಗಿನ ಜಾವ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಹಿರೆಕೆರೆಗೆ ಕರೆತರಲಾಯಿತು.
ಸಕಲ ಪೂಜಾ ವಿಧಾನ ಸಲ್ಲಿಸಿದ ಬಳಿಕ ಪುರವಂತರು, ಅರ್ಚಕರು, ವೀರಗಾಸೆಯವರು ಪುಷ್ಪಾಲಂಕೃತವಾಗಿದ್ದ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ಸ್ವಾಮಿಯನ್ನು ಕುಳ್ಳಿರಿಸಿಕೊಂಡು ನಂದಿಕೋಲು, ಸಮ್ಮಾಳ ಸೇರಿದಂತೆ ಸಕಲ ವಾದ್ಯಗಳೊಂದಿಗೆ ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಯಿತು. ದಾರಿಯುದ್ದಕ್ಕೂ ಭಕ್ತರು ಘೋಷವಾಕ್ಯ ಮೊಳಗಿಸಿದರು.
ಪಲ್ಲಕ್ಕಿ ಬರುವ ಮುನ್ನವೇ ಭಕ್ತರನ್ನು ನಿಯಂತ್ರಿಸಲು ದೇವಸ್ಥಾನ ಸಮಿತಿ ಅಗ್ನಿಕುಂಡ ಪ್ರವೇಶಿಸಲು ಅನುಮತಿಸಿದರು. ಚಿಕ್ಕಮಕ್ಕಳಿಂದ ವೃದ್ದರ ತನಕ ಭಕ್ತರು ನಿಗಿ ನಿಗಿ ಕೆಂಡದ ಮೇಲೆ ನಡೆದು ಭಕ್ತಿ ಸಲ್ಲಿಸಿದರು. ಮಹಿಳೆಯರು, ಯುವತಿಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಸಮ್ಮಾಳ, ನಂದಿಕೋಲು, ಗುಗ್ಗಳ ಹೊತ್ತಿದ್ದವರನ್ನು ಒಳಗೊಂಡು ಸಾವಿರಾರು ಭಕ್ತರು ಸಾಲಾಗಿ ಬಂದು ಅಗ್ನಿ ಕುಂಡದಲ್ಲಿ ಹಾಯ್ದರು. ಸುಮಾರು ಮೂರು ಗಂಟೆಗಳ ಕಾಲ ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿ ಸಲ್ಲಿಸಿದರು.
ಧರ್ಮಕರ್ತ ಪಾಟೀಲ್ ಪ್ರವೀಣ್ ಕುಮಾರ, ಕೊಟ್ರಯ್ಯ, ಶಶಿಧರ ಪೂಜಾರ, ಪಿ.ಬಿ.ಗೌಡ್ರು, ಪಾಟೀಲ್ ಬೆಟ್ಟನಗೌಡ, ಪೂಜಾರ ವೀರಮಲ್ಲಪ್ಪ. ಶಶಿಧರ ಪೂಜಾರ್, ಚಂದ್ರಶೇಖರ ಪೂಜಾರ, ವಾಗೀಶ್ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಅರ್ಚಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.