ADVERTISEMENT

ಜನಸ್ತೋಮದ ಮಧ್ಯೆ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ, ಕೆಂಡ ತುಳಿದರು, ತೇರು ಎಳೆದರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 14:26 IST
Last Updated 7 ಏಪ್ರಿಲ್ 2019, 14:26 IST
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಯಿತು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಯಿತು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಭಾನುವಾರ ಸಂಜೆ ನಗರದಲ್ಲಿ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ದೇವಸ್ಥಾನದ ಎದುರಿನಿಂದ ಸಂಡೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ವರೆಗೆ ತೇರು ಎಳೆದರು. ಈ ವೇಳೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸಂಜೆ ನಾಲ್ಕು ಗಂಟೆಯಿಂದಲೇ ಜನ ದೇವಸ್ಥಾನದ ಪರಿಸರದಲ್ಲಿ ಸೇರಿದ್ದರು. ದೇಗುಲ ಸಮೀಪದ ಕಟ್ಟಡಗಳ ಮೇಲೆ ಜನ ಸೇರಿದ್ದರು. ತೇರು ಹಾದು ಹೋಗುವಾಗ ಅಲ್ಲಿಂದಲೇ ಕೈಮುಗಿದರು. ಉತ್ತತ್ತಿ ಎಸೆದರು. ಸ್ನೇಹಿತರು, ಮನೆ ಮಂದಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ADVERTISEMENT

ಇದಕ್ಕೂ ಮುನ್ನ ಧ್ವಜದ ಹರಾಜು ಪ್ರಕ್ರಿಯೆ ನಡೆಯಿತು. ನೆಹರೂ ಕಾಲೊನಿಯ ಎಲ್‌. ಬಸವರಾಜು ಅವರು ₹51 ಸಾವಿರಕ್ಕೆ ಧ್ವಜ ಅವರದಾಗಿಸಿಕೊಂಡರು. ಬಾಣದಕೇರಿಯವರು ಕೇರಿಯಿಂದ ದೇಗುಲದ ವರೆಗೆ ಸಾಣೆ ತಂದರು. ಈ ವೇಳೆ ರಂಗಿನಾಟದಲ್ಲಿ ಮೈಮರೆತು ಹೆಜ್ಜೆ ಹಾಕಿದರು. ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತೇರು ಎಳೆದರು.

ಭಾರಿ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಸಂಡೂರು ರಸ್ತೆ, ಟಿ.ಬಿ. ಡ್ಯಾಂ ರಸ್ತೆಯಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಎಲ್ಲೆಡೆ ಜನಜಾತ್ರೆ ಇದ್ದದ್ದರಿಂದ ಜನ ನಡೆದುಕೊಂಡು ಹೋಗಲು ಪರದಾಡಿದರು.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ, ಮುಖಂಡ ಎಚ್‌.ಆರ್‌. ಗವಿಯಪ್ಪ ಇದ್ದರು. ಶನಿವಾರ ಸಂಜೆ ಅಗ್ನಿ ತುಳಿಯುವ ಕಾರ್ಯಕ್ರಮ ನಡೆಯಿತು. ಜನ ಬೆಂಕಿಯಲ್ಲಿ ಹೆಜ್ಜೆ ಹಾಕಿ ಹರಕೆ ತೀರಿಸಿದರು. ಜಾತ್ರೆ ನಿಮಿತ್ತ ದೇಗುಲಕ್ಕೆ ವಿದ್ಯುದ್ದೀಪಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.