ADVERTISEMENT

ವಿಜಯನಗರ ಜಿಲ್ಲೆ ಘೋಷಣೆ ವಿಜಯೋತ್ಸವ, ಸ್ವ-ಕ್ಷೇತ್ರಕ್ಕೆ ಬಂದ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 14:00 IST
Last Updated 8 ಫೆಬ್ರುವರಿ 2021, 14:00 IST
ಆನಂದ್ ಸಿಂಗ್ ಅವರು ತೆರೆದ ಜೀಪಿನಲ್ಲಿ ನಗರದಲ್ಲಿ ಸುತ್ತಾಡಿದರು.
ಆನಂದ್ ಸಿಂಗ್ ಅವರು ತೆರೆದ ಜೀಪಿನಲ್ಲಿ ನಗರದಲ್ಲಿ ಸುತ್ತಾಡಿದರು.    

ಹೊಸಪೇಟೆ: ವಿಜಯನಗರ ಜಿಲ್ಲೆ ರಚಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ನಗರ ಸೇರಿದಂತೆ ಪಶ್ಚಿಮ ತಾಲ್ಲೂಕುಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಹೆಲಿಕಾಪ್ಟರ್‌ನಲ್ಲಿ ನಗರದ ಮುನ್ಸಿಪಲ್‌ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದು, ನೆಲಕ್ಕೆ ನಮಿಸಿದರು.

ಸಚಿವರು ಬರುವ ವಿಷಯ ಮೊದಲೇ ಗೊತ್ತಾಗಿ ನೂರಾರು ಜನ ಮೈದಾನದಲ್ಲಿ ಸೇರಿದ್ದರು. ಆನಂದ್ ಸಿಂಗ್ ಬರುತ್ತಿದ್ದಂತೆ ಅವರ ಪರ ಜಯಘೋಷ ಹಾಕಿದರು. ವಿಜಯನಗರಕ್ಕೆ ಜಯವಾಗಲಿ ಎಂದು ಕೂಗಿದರು.

ADVERTISEMENT

ಹಾರ, ತುರಾಯಿ ಹಿಡಿದುಕೊಂಡು ಬಂದವರು ಅವರನ್ನು ಮುತ್ತಿಕೊಂಡರು. ಬಳಿಕ ಆನಂದ್ ಸಿಂಗ್ ಅವರು ತೆರೆದ ಜೀಪಿನಲ್ಲಿ ನಗರದಲ್ಲಿ ಸುತ್ತಾಡಿದರು. ಅವರೊಂದಿಗೆ ಅವರ ಬೆಂಬಲಿಗರ ದಂಡು ಇತ್ತು. ನಗರದ ಕಾಲೇಜು ರಸ್ತೆ, ರೋಟರಿ ವೃತ್ತ, ಬಸ್ ನಿಲ್ದಾಣ, ಮೂರಂಗಡಿ ವೃತ್ತ, ಹಂಪಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಳಿಕ ಆನಂದ್ ಸಿಂಗ್ ಅವರು ವಿರೂಪಾಕ್ಷೇಶ್ವರನ ದರ್ಶನಕ್ಕೆ ಹಂಪಿ ಕಡೆಗೆ ಪಯಣ ಬೆಳೆಸಿದರು.

ಇದಕ್ಕೂ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಆಡಳಿತಾತ್ಮಕ ದೃಷ್ಟಿಯಿಂದ ಪಶ್ಚಿಮ ತಾಲ್ಲೂಕುಗಳ ಜನರಿಗೆ ಸಹಾಯವಾಗಲಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಎರಡು ಜಿಲ್ಲೆಗಳ ನಡುವೆ ಆಡಳಿತದ ಅನುಕೂಲಕ್ಕಾಗಿ ಒಂದು ಗಡಿರೇಖೆ ಬರಲಿದೆ. ಆದರೆ, ಹಿಂದಿನಂತೆ ನಾವೆಲ್ಲ ಅಣ್ಣ ತಮ್ಮಂದಿರಂತೆಯೇ ಇರೋಣ ಎಂದರು.

ಬಳ್ಳಾರಿಯಲ್ಲಿ ಆಂಧ್ರದವರ ಪ್ರಭಾವ ಹೆಚ್ಚಾಗಲಿದೆ ಎನ್ನುವುದು ಸುಳ್ಳು. ಅದು ಆಂಧ್ರ ಪ್ರದೇಶ ಸೇರಲಿದೆ ಎನ್ನುವುದು ಕೂಡ ಶುದ್ಧ ಸುಳ್ಳು. ಬಳ್ಳಾರಿ ಕಿತ್ತುಕೊಳ್ಳಲು ಇದೇನು ನೆಲ್ಲಿಕಾಯಿ ಹಣ್ಣಲ್ಲ. ಒಂದುವೇಳೆ ಆ ಪ್ರಯತ್ನಕ್ಕೆ ಕೈಹಾಕಿದರೆ ನಾವು ಕೈಕಟ್ಟಿ ಕೂರಲ್ಲ ಎಂದರು.

ಬೆಳಗಾವಿಯ ಕೆಲವು ಭಾಗಗಳಲ್ಲಿ ಮರಾಠಿಗರ ಪ್ರಾಬಲ್ಯವಿದ್ದರೂ ಅದು ನಮ್ಮ ರಾಜ್ಯದಲ್ಲಿಯೇ ಇದೆ. ಅದೇ ರೀತಿ ಬಳ್ಳಾರಿ ಕೂಡ ನಮ್ಮ ರಾಜ್ಯದಲ್ಲಿಯೇ ಇರುತ್ತದೆ. ಜಿಲ್ಲೆ ಬೇರೆ ಆಗಿರುವುದರಿಂದ ಖನಿಜ ನಿಧಿ ಸಿಗುವುದಿಲ್ಲ, ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನ ಸಿಗುವುದಿಲ್ಲ ಎನ್ನುವುದು ತಪ್ಪು. ಇದೆಲ್ಲ ಮಾಧ್ಯಮಗಳ ವದಂತಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.