ADVERTISEMENT

ವಿಜಯನಗರ | ಜನನ, ಮರಣ ನೋಂದಣಿ ವಿಳಂಬವಾಗದಂತೆ ನಿಗಾ ವಹಿಸಿ: ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 6:31 IST
Last Updated 12 ಡಿಸೆಂಬರ್ 2025, 6:31 IST
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು 
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು    

ಹೊಸಪೇಟೆ(ವಿಜಯನಗರ): ‘ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳು ಮತ್ತು ಜನನ, ಮರಣಗಳ ನೋಂದಣಿಗಳನ್ನು ವಿಳಂಬವಾಗದಂತೆ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3446 ಬೆಳೆ ಕಟಾವು ಪ್ರಯೋಗಗಳು ಮತ್ತು ಹಿಂಗಾರು ಹಂಗಾಮಿನಲ್ಲಿ 906 ಬೆಳೆ ಕಟಾವು ಪ್ರಯೋಗಗಳನ್ನು ಹಂಚಿಕೆ ಮಾಡಿದ್ದು, ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಶೇ 86ರಷ್ಟು ನಮೂನೆ-2 ಅನ್ನು ಸಲ್ಲಿಸಲಾಗಿದ್ದು, ಬಾಕಿ ಉಳಿದ ನಮೂನೆಗಳನ್ನು ತಕ್ಷಣ ನೋಂದಣಿ ಮಾಡಲು ಸೂಚಿಸಿದರು.

ADVERTISEMENT

ಜಿಲ್ಲೆಯಲ್ಲಿ ಕಳೆದ 4ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜನನ 7,870, ಮರಣ 3,653 ಒಟ್ಟು 11,523 ನೋಂದಣಿಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗದಂತೆ ಕ್ರಮವಹಿಸಲು ಸೂಚಿಸಿದರು. ತಾಲ್ಲೂಕು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನನ ನೋಂದಣಿಯನ್ನು ನಿಗದಿತ ಸಮಯದಲ್ಲಿ ನೋಂದಾಯಿಸುತ್ತಿಲ್ಲ ಎಂದು ಪರಿಶೀಲನೆಯಿಂದ ತಿಳಿದು ಬಂದಿದ್ದು, ಕ್ರವಹಿಸುವಂತೆ ಸೂಚಿಸಿದರು.

 ಜಿಲ್ಲೆಯಲ್ಲಿ 2025-26ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಮುಂಗಾರು ಸಾಲಿನಲ್ಲಿ ಒಟ್ಟು 1,03,495 ರೈತರು ನೋಂದಾಯಿಸಿದ್ದಾರೆ. ಒಟ್ಟು ₹5,20,21.89 ಲಕ್ಷ  ವಿಮಾ ಮೊತ್ತ ₹1,066.31 ಲಕ್ಷ ವಿಮಾ ಕಂತು ಪಾವತಿಸಲಾಗಿದೆ. ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಲು ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನನ ಮತ್ತು ಪ್ರಮಾಣ ಪತ್ರಗಳನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ನೀಡಲಾಗುವುದು. ಪಿಡಿಒಗಳು ನಿಗಾ ವಹಿಸಬೇಕು. ಹಾಗೂ ಬೆಳೆ ವಿಮೆ ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ಭರ್ತಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಟಿ.ಮಂಜುನಾಥ, ಉಪನಿರ್ದೇಶಕ ನಯೀಮ್, ತೋಟಗಾರಿಕಾ ಉಪನಿರ್ದೇಶಕ ಪ್ರಭುರಾಜ್, ಶ್ರೀಹರ್ಷ, ತಾಲ್ಲೂಕು ವೈದ್ಯಾಧಿಕಾರಿ ಡಾ.ಹರಿಪ್ರಸಾದ ಇದ್ದರು.