ADVERTISEMENT

ವಿಮ್ಸ್‌: ವರ್ಷದಲ್ಲಿ 4,08 ಲಕ್ಷ ಜನರಿಗೆ ಚಿಕಿತ್ಸೆ

ಆರ್. ಹರಿಶಂಕರ್
Published 23 ಡಿಸೆಂಬರ್ 2024, 6:59 IST
Last Updated 23 ಡಿಸೆಂಬರ್ 2024, 6:59 IST
   

ಬಳ್ಳಾರಿ: ‘ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ’ ವ್ಯಾಪ್ತಿಯ ‘ಬಳ್ಳಾರಿ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ವಿಮ್ಸ್)’ ಈ ಒಂದು ವರ್ಷದಲ್ಲಿ ಒಟ್ಟಾರೆ 4,08,115 ರೋಗಿಗಳಿಗೆ ಚಿಕಿತ್ಸೆ ಸಿಕ್ಕಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಇತ್ತೀಚೆಗಷ್ಟೇ ಅಂತ್ಯಗೊಂಡ ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡಿದ್ದ ‘ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ’ದ ಶಾಸಕ ನಾರಾ ಭರತ್‌ ರೆಡ್ಡಿ, ‘ವಿಮ್ಸ್‌ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅಕ್ರಮ ಮನೆ ಮಾಡಿದೆ, ರೋಗಿಗಳು ಒಳಗೆ ಹೋದರೆ ಹೊರಗೆ ಬರುವ ಗ್ಯಾರಂಟಿಯೇ ಇಲ್ಲ. ಹೀಗಾಗಿ ಸಂಸ್ಥೆಯಲ್ಲಿನ ಅಕ್ರಮದ ತನಿಖೆಗೆ ತಂಡ ರಚಿಸಬೇಕು, ನಿರ್ದೇಶಕರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಸರ್ಕಾರದ ಗಮನ ಸೆಳೆದಿದ್ದರು.

ಶಾಸಕರೊಬ್ಬರ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯು ಸಂಸ್ಥೆಯ ವಾಸ್ತವ ಅರಿಯುವ ಪ್ರಯತ್ನ ಮಾಡಿದೆ. ಸಂಸ್ಥೆಯಲ್ಲಿ ನಾಗರಿಕರಿಗೆ ಸಿಗುತ್ತಿರುವ ವೈದ್ಯಕೀಯ ಸೇವೆಗಳ ಕುರಿತ ದಾಖಲೆಗಳನ್ನು ಸಂಸ್ಥೆಯ ಮೊಹರಿನೊಂದಿಗೆ ಪಡೆದು ಪರಿಶೀಲಿಸಲಾಗಿದೆ. 

ADVERTISEMENT

ಅದರಂತೆ, ಈ ವರ್ಷ (ಜನವರಿಯಿಂದ ಡಿಸೆಂಬರ್ ವರೆಗೆ) ಚಿಕಿತ್ಸೆಗಾಗಿ ಒಟ್ಟು 4,08,115 ರೋಗಿಗಳು ವಿಮ್ಸ್‌ಗೆ ಭೇಟಿನೀಡಿದ್ದಾರೆ. ಇದರಲ್ಲಿ 46,615 ಒಳರೋಗಿಗಳು. ಸಂಸ್ಥೆಯಲ್ಲಿ ಈ ವರ್ಷ 10,082 ಮಂದಿಗೆ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. 29,248 ಮಂದಿಗೆ ಸಣ್ಣಪ್ರಮಾಣದ ಶಸ್ತ್ರಚಿಕಿತ್ಸೆ ನೀಡಲಾಗಿದೆ. 3,059 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದೂ ತಿಳಿದುಬಂದಿದೆ.

ಆಸ್ಪತ್ರೆಗೆ ದಾಖಲಾದ ಒಟ್ಟಾರೆ ರೋಗಿಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣವು ಶೇ 0.74 ಇದೆ. ಅಂದರೆ, ಶೇ 99ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎನ್ನುತ್ತಿವೆ ದಾಖಲೆಗಳು.

ಇನ್ನೊಂದೆಡೆ, ವಿಮ್ಸ್‌ನದ್ದೇ ಅಂಗ ಸಂಸ್ಥೆಯಾದ ಟ್ರಾಮಾಕೇರ್‌ ಸೆಂಟರ್‌ನಲ್ಲಿ ಈ ವರ್ಷ ಒಟ್ಟಾರೆ 1,19,983 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 7,251 ಮಂದಿ ಒಳರೋಗಿಗಳು. 3,372 ಮಂದಿಗೆ ದೊಡ್ಡ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, 46,631 ಸಣ್ಣಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಲ್ಲಿ ಈ ವರ್ಷ ಒಟ್ಟಾರೆ 387 ಮಂದಿ ಕೊನೆಯುಸಿರೆಳೆದಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ಒಟ್ಟಾರೆ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣವು ಶೇ 0.33ರಷ್ಟು ಆಗಿದೆ. ಅಂದರೆ, ಇಲ್ಲಿಯೂ ಶೇ 99 ರಷ್ಟು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಕ್ಷಯರೋಗ ಮತ್ತು ಶ್ವಾಸಕೋಶ ಆಸ್ಪತ್ರೆಯಲ್ಲಿ ಈ ವರ್ಷ 2184 ಮಂದಿ ಚಿಕಿತ್ಸೆ ಪಡೆದಿದ್ದು, ಇದರಲ್ಲಿ 667 ಮಂದಿ ಒಳರೋಗಿಗಳು. ಈ ವಿಭಾಗದಲ್ಲಿ ಒಂದು ವರ್ಷದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಸಾವಿನ ಪ್ರಮಾಣ ಶೇ 0.27 ಆಗಿದೆ. ಅದರೊಂದಿಗೆ ಶೇ 99ಕ್ಕಿಂತಲೂ ಅಧಿಕ ಮಂದಿ ಇಲ್ಲಿ ಯಶಸ್ವಿ ಚಿಕಿತ್ಸೆ ಪಡೆದಿದ್ದಾರೆ.

ಮಕ್ಕಳ ವಿಭಾಗದಲ್ಲಿ ಒಟ್ಟು 44195 ಕಂದಮ್ಮಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 9,189 ಒಳರೋಗಿಗಳಾಗಿದ್ದಾರೆ. ಶೇ 97ಕ್ಕೂ ಅಧಿಕ ಮಂದಿಗೆ ಯಶಸ್ವಿ ಚಿಕಿತ್ಸೆ ದೊರೆತಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. 

ಮಕ್ಕಳ ಐಸಿಯು ವಿಭಾಗದಲ್ಲಿ ಮಾತ್ರ ಶೇ 6ರಿಂದ 10ರಷ್ಟು ಸಾವಿನ ಪ್ರಮಾಣ ಇರುವುದು ಕಂಡು ಬಂದಿದೆ. 2024ರ ಜನವರಿಯಲ್ಲಿ ಐಸಿಯುಗೆ ದಾಖಲಾದ 301 ಮಕ್ಕಳಲ್ಲಿ 31 ಮಂದಿ ಮೃತಪಟ್ಟಿದ್ದರು. ಅವಧಿ ಪೂರ್ವ ಜನನ, ಹುಟ್ಟುತ್ತಲೇ ಸಮಸ್ಯೆಗಳಿರುವುದು ಇದಕ್ಕೆ ಕಾರಣವಾಗಿತ್ತು. ನವೆಂಬರ್‌ನಲ್ಲಿ ಐಸಿಯು ಸೇರಿದ 240 ಮಕ್ಕಳಲ್ಲಿ 18 ಮಕ್ಕಳು ಮೃತಪಟ್ಟಿದ್ದವು. ಮಕ್ಕಳ ಐಸಿಯುನಲ್ಲಿ ತಿಂಗಳಿಗೆ ಕನಿಷ್ಠ 18ರಿಂದ 31 ಮಕ್ಕಳು ಸಾವಿಗೀಡಾಗುತ್ತಿರುವುದು ಗೊತ್ತಾಗಿದೆ. ಇದರೊಂದಿಗೆ ಆಸ್ಪತ್ರೆಯು ಎನ್‌ಐಸಿಯು ವಿಭಾಗದ ಕಡೆಗೆ ಇನ್ನಷ್ಟು ಹೆಚ್ಚಿನ ಗಮನಕೊಡಬೇಕಾದ ಅಗತ್ಯವನ್ನು ಅಂಕಿ ಸಂಖ್ಯೆಗಳು ಹೇಳುತ್ತಿದೆ. 

11,146 ಮಂದಿಗೆ ಡಯಾಲಿಸಿಸ್‌: ಆಸ್ಪತ್ರೆಯಲ್ಲಿರುವ ಒಟ್ಟಾರೆ 14 ಡಯಾಲಿಸಿಸ್‌ ಯಂತ್ರಗಳ ಪೈಕಿ ಕೇವಲ 4 ಮಾತ್ರ ಕಾರ್ಯ ನಿರ್ವಹಿಸುತ್ತಿರುವುದಾಗಿ ಆರೋಪಗಳು ಕೇಳಿ ಬಂದಿದ್ದವು. ಆದರೆ, ವಾಸ್ತವದಲ್ಲಿ 4 ಯಂತ್ರ ಕೆಟ್ಟಿದ್ದು, 10 ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ವರ್ಷ ಒಟ್ಟಾರೆ 11,146 ಮಂದಿಗೆ ಡಯಾಲಿಸಿಸ್‌ ಮಾಡಲಾಗಿದೆ. ಇತ್ತೀಚೆಗೆ ಮೃತಪಟ್ಟ ಬಾಣಂತಿ ಸಮಯಾ ಅವರಿಗೆ ‘ಬೆಡ್‌ಸೈಡ್‌ ಡಯಾಲಿಸಿಸ್‌’ ಒದಗಿಸಲಾಗಿತ್ತು. ಹೀಗಾಗಿಯೇ ಬಹು ಅಂಗಾಂಗ ವೈಫಲ್ಯದ ಹೊರತಾಗಿಯೂ ಆಕೆ 45 ದಿನ ಜೀವಿಸಿದ್ದರು.

ಈ ವರ್ಷ 7,630 ಹೆರಿಗೆ:

ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ, ಸುರಕ್ಷಿತ ಹೆರಿಗೆ ಬಗ್ಗೆ ಜನರಲ್ಲಿ ಆತಂಕ ಮನೆ ಮಾಡಿದೆ. ಆದರೆ, ವಿಮ್ಸ್‌ನಲ್ಲಿ ಶೇ 99ರಷ್ಟು ಸುರಕ್ಷಿತ ಹೆರಿಗೆಗಳು ನಡೆದಿರುವುದು ಲಭ್ಯ ದಾಖಲೆಗಳಿಂದ ಗೊತ್ತಾಗಿದೆ. 

ಈ ವರ್ಷ ವಿಮ್ಸ್‌ನಲ್ಲಿ ಒಟ್ಟಾರೆ 7,630 ಮಂದಿಗೆ ಹೆರಿಗೆ ನೆರವೇರಿಸಲಾಗಿದೆ. ಅದರಲ್ಲಿ 3,296 ಸಾಮಾನ್ಯ ಹೆರಿಗೆಯಾಗಿದ್ದರೆ, 4,334 ಶಸ್ತ್ರಚಿಕಿತ್ಸೆ ಆಗಿವೆ. 32 ತಾಯಂದಿರು ನಾನಾ ಕಾರಣಗಳಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಹೆರಿಗೆಯಲ್ಲಿ ಸಾವಿನ ಪ್ರಮಾಣ ಶೇ 0.41 ಆಗಿದೆ.

ಸಮಸ್ಯೆ ಇಲ್ಲದಿಲ್ಲ

ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡುತ್ತಿದ್ದರೂ ವಿಮ್ಸ್‌ನಲ್ಲಿ ಸಮಸ್ಯೆಗಳೂ ಇವೆ. ದೂರದ ಊರುಗಳಿಂದ ರೋಗಿಗಳನ್ನು ಕರೆತರುವವರು ಆಸ್ಪತ್ರೆಯ ಹೊರಗೆ ನೀರು, ನೆರಳಿಲ್ಲದೇ ಪರಿತಪಿಸಬೇಕಾಗುತ್ತದೆ. ಆಸ್ಪತ್ರೆ ಸಿಬ್ಬಂದಿ, ಕೆಲ ವೈದ್ಯರು ಸೌಜನ್ಯದಿಂದ ವರ್ತಿಸುವುದಿಲ್ಲ. ಧಮಕಿ ಹಾಕಿದಂತೆ ಮಾತನಾಡುತ್ತಾರೆ ಎಂಬ ಆರೋಪಗಳೂ ಇವೆ. ಟ್ರಾಮಾ ಕೇರ್‌ ಸೆಂಟರ್‌ ಬಳಿಯಂತೂ ಕ್ಯಾಂಟೀನ್‌ ಕೂಡ ಇಲ್ಲ. ಹೀಗಾಗಿ ವಿದ್ಯಾರ್ಥಿ, ಸಿಬ್ಬಂದಿ, ರೋಗಿಗಳ ಸಂಬಂಧಿಗಳು ಅನಿವಾರ್ಯವಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆದ ಪ್ರಸಂಗಗಳೂ ನಡೆದಿದ್ದು, ಅವರಿಗೆ ಭದ್ರತೆ ಇಲ್ಲ ಎಂಬ ಆರೋಪವೂ ಇದೆ.

ವೈದ್ಯರ ಖಾಸಗಿ ಸೇವೆ ಅಭಾದಿತ

ಆಸ್ಪತ್ರೆಯ ಹಲವು ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಕೆಲವರು ಕರ್ತವ್ಯದ ಸಮಯದಲ್ಲೇ ಹೊರಗಿನ ಸೇವೆಗೆ ಹೋಗುವುದೂ ಇದೆ. ಇದು ವಿಮ್ಸ್‌ನ ಆರೋಗ್ಯ ಸೇವೆಗೆ ಇರುವ ಬಹುದೊಡ್ಡ ತೊಡಕು.  ಇದರ ಜತೆಗೇ, ವರ್ಗಾವಣೆ ಎಂಬುದೇ ಇಲ್ಲದ ಕಾರಣ, ಸಂಸ್ಥೆಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವುದು, ದೊಡ್ಡ ಹುದ್ದೆಗಳಿಗಾಗಿ ಲಾಬಿ ಮಾಡುವುದು, ರಾಜಕೀಯ ಮಾಡುವುದು ಜೋರಾಗಿಯೇ ನಡೆಯುತ್ತಿದೆ.

ಪ್ರಭಾವಿಗಳ ಆಟ: ಸಿಬ್ಬಂದಿ ಪರದಾಟ

ಆಸ್ಪತ್ರೆಯಲ್ಲಿ ತಾವು ಹೇಳಿದವರಿಗೆ ಕೆಲಸ ಕೊಡಬೇಕು, ನಮಗೆ ಮಾಮೂಲು ಬರಬೇಕು ಎಂದು ಇತ್ತೀಚೆಗೆ ಕೆಲ ಪ್ರಭಾವಿಗಳು, ಪಟ್ಟಭದ್ರರು ನಿರ್ದೇಶಕರನ್ನು ಪೀಡಿಸುತ್ತಿರುವುದಾಗಿ ಗೊತ್ತಾಗಿದೆ. ನೀವು ಹೇಳಿದವರಿಗೆ ಹುದ್ದೆ ಕಲ್ಪಿಸಲು ಇಲ್ಲಿ ಜಾಗ ಖಾಲಿ ಇಲ್ಲ ಎಂದು ಹೇಳಿದರೆ ‘ಇರುವವರನ್ನು ವಜಾ ಮಾಡಿ ನಮ್ಮವರನ್ನು ಸೇರಿಸಿಕೊಳ್ಳಿ’ ಎಂದು ಒತ್ತಡ ಹೇರುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. 

ಆದರೆ, ಇದನ್ನು ನಿರ್ದೇಶಕರು ಅಲ್ಲಗೆಳೆದಿದ್ದಾರೆ. ಅಂಥ ಯಾವ ಒತ್ತಡವೂ ನನ್ನ ಮೇಲೆ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.