ADVERTISEMENT

ಮತದ ಮಹತ್ವದ ಸಾರಿದ ಕೃಷ್ಣದೇವರಾಯ! ‘ವಿಜಯನಗರ ವೈಭವ’ ಹೆಸರಿನಲ್ಲಿ ಜನಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 15:08 IST
Last Updated 16 ಏಪ್ರಿಲ್ 2019, 15:08 IST
ಮತದಾನದ ಮಹತ್ವ ಸಾರುತ್ತಿರುವ ಶ್ರೀ ಕೃಷ್ಣದೇವರಾಯ ವೇಷಧಾರಿ
ಮತದಾನದ ಮಹತ್ವ ಸಾರುತ್ತಿರುವ ಶ್ರೀ ಕೃಷ್ಣದೇವರಾಯ ವೇಷಧಾರಿ   

ಹೊಸಪೇಟೆ: ಅಲಂಕರಿಸಿದ ರಥದಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯ, ಹಿಂಬದಿಯಲ್ಲಿ ಶಸ್ತ್ರಸಜ್ಜಿತ ಸೈನಿಕರಿದ್ದರು. ಅವರನ್ನು ನೋಡಿ ಅಲ್ಲಿದ್ದವರಿಗೆ ಕ್ಷಣಕಾಲ ಅಚ್ಚರಿ.

ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಜಾಥಾದಲ್ಲಿ ಕಂಡು ಬಂದ ದೃಶ್ಯಗಳಿವು.

‘ವಿಜಯನಗರ ವೈಭವ’ದ ಹೆಸರಿನಲ್ಲಿ ನಡೆದ ಜಾಥಾದಲ್ಲಿ ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿಯವರು ಕೃಷ್ಣದೇವರಾಯನ ವೇಷ ಧರಿಸಿ ಗಮನ ಸೆಳೆದರು. ಅಷ್ಟೇ ಅಲ್ಲ, ಕೈಯಲ್ಲಿ ಖಡ್ಗ ಹಿಡಿದು ಮಾತನಾಡಿದರು. ‘ನನ್ನ ಪ್ರೀತಿಯ ಪ್ರಜೆಗಳೇ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆ ಬದುಕುತ್ತಿದ್ದೇವೆ. ಮತದಾನ ಅತ್ಯಮೂಲ್ಯವಾದುದು. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಿ ಅರ್ಹರಾದವರನ್ನು ಆರಿಸಿ ಸಂಸತ್ತಿಗೆ ಕಳುಹಿಸಬೇಕು. ಮರೆಯದಿರಿ.. ಮರೆಯದಿರಿ..’ ಎಂದು ಹೇಳಿದರು.

ADVERTISEMENT

ಇದಕ್ಕೂ ಮುನ್ನಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಜಾಥಾಕ್ಕೆ ಚಾಲನೆ ನೀಡಿ, ‘ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಈ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದರು.

ನಗರಸಭೆ ಪೌರಾಯುಕ್ತ ವಿ. ರಮೇಶ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ, ಆರೋಗ್ಯ ಇಲಾಖೆಯ ಎಂ.ಪಿ.ದೊಡ್ಡಮನಿ, ಧರ್ಮನಗೌಡ, ಸರ್ಕಾರಿ ನೌಕರರ ಸಂಘದ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮೇನ್‌ ಬಜಾರ್‌ನಿಂದ ಆರಂಭವಾದ ಜಾಥಾ ಮಹಾತ್ಮ ಗಾಂಧಿ ವೃತ್ತ, ಬಸ್‌ ನಿಲ್ದಾಣ, ರೋಟರಿ ವೃತ್ತ, ಕಾಲೇಜು ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕಾಲೇಜು ರಸ್ತೆ ಮೂಲಕ ಹಾದು ಮುನ್ಸಿಪಲ್‌ ಮೈದಾನದ ಬಳಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.