ADVERTISEMENT

ಮರುಭೂಮಿಯಾದ ತುಂಗಭದ್ರೆ: ಮೀನುಗಾರರು ಅತಂತ್ರ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 23 ಮಾರ್ಚ್ 2024, 6:39 IST
Last Updated 23 ಮಾರ್ಚ್ 2024, 6:39 IST
ಕಂಪ್ಲಿ ತಾಲ್ಲೂಕು ಇಟಿಗಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿ ನೀರಿಲ್ಲದೆ ಒಣಗಿರುವ ದೃಶ್ಯ
ಕಂಪ್ಲಿ ತಾಲ್ಲೂಕು ಇಟಿಗಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿ ನೀರಿಲ್ಲದೆ ಒಣಗಿರುವ ದೃಶ್ಯ   

ಕಂಪ್ಲಿ: ಕಳೆದ ಸಾಲಿನಲ್ಲಿ ಮಳೆ ಕೊರತೆ, ಇತ್ತೀಚೆಗೆ ಏರಿಕೆಯಾಗುತ್ತಿರುವ ವಿಪರೀತ ಬಿಸಿಲಿನಿಂದ ಈ ಭಾಗದ ಜೀವನಾಡಿ ತುಂಗಭದ್ರಾ ನದಿ ಕೆಲ ದಿನಗಳಿಂದ ನೀರಿಲ್ಲದೆ ಒಣಗಿದೆ.

ತಾಲ್ಲೂಕಿನ ಇಟಿಗಿ, ಸಣಾಪುರ ಗ್ರಾಮದ ಬಳಿ ನದಿ ಸಂಪೂರ್ಣ ಬತ್ತಿ ಅಂಗಳದಂತಾಗಿದೆ. ಅದರಿಂದ ನದಿಯಲ್ಲಿದ್ದ ಮೀನುಗಳು ಅಲ್ಲಲ್ಲಿ ಸತ್ತು ದುರ್ನಾತ ಬೀರುತ್ತಿದೆ. ಮೀನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದ ಹಲವು ಕುಟುಂಬಗಳು ಸದ್ಯ ಸಂಕಷ್ಟದಲ್ಲಿವೆ.

ಇಟಿಗಿ ಗ್ರಾಮದ ಸುಮಾರು 35 ಮತ್ತು ಸಣಾಪುರ ಗ್ರಾಮದ 15 ಮೀನುಗಾರ ಕುಟುಂಬಗಳು ಹಲವು ದಶಕಗಳಿಂದ ನದಿಯಲ್ಲಿ ಮೀನು ಬೇಟೆಯಾಡಿ ಮಾರಾಟದಿಂದ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಇಂದು ಕೆಲಸವಿಲ್ಲದೆ ಅವರಿಗೆ ‘ಅನ್ನಭಾಗ್ಯ’ ಅಕ್ಕಿಯೇ ತುತ್ತಿನ ಚೀಲಕ್ಕೆ ಆಸರೆಯಾಗಿದೆ.

ADVERTISEMENT

ನದಿ ಬತ್ತಿರುವುದರಿಂದ ಬೆಳಗಾವಿ ಮೂಲದ ಸಂಚಾರಿ ಕುರಿಗಳಿಗೆ ಮತ್ತು ಕೊಪ್ಪಳ ಜಿಲ್ಲೆಯ ವಲಸೆ ಜಾನುವಾರುಗಳಿಗೆ ಈ ಬಾರಿ ಕುಡಿಯುವ ನೀರಿನ ತೊಂದರೆಯಾಗಿದೆ. ಸದ್ಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಆಂಧ್ರಪ್ರದೇಶಕ್ಕೆ ಕುಡಿಯುವ ನೀರಿಗಾಗಿ ನೀರು ಹರಿಸಲಾಗುತ್ತಿದೆ. ಈ ನೀರು ಗುಳೆ ಜಾನುವಾರು, ಕುರಿಗಳಿಗೆ ಕೆಲ ದಿನ ಆಸರೆಯಾಗಲಿದೆ.
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕೆಲ ದಿನಗಳಿಂದ ಕ್ಷೀಣಿಸಿದೆ. ನದಿಯಲ್ಲಿ ಮರಳುಚೀಲ ಜೋಡಿಸುವ ಮೂಲಕ ಜಾಕ್‍ವೆಲ್‍ಗೆ ನೀರು ತಲುಪುವ ವ್ಯವಸ್ಥೆ ಮಾಡಲಾಗಿದೆ.

ಕಂಪ್ಲಿ ತಾಲ್ಲೂಕು ಇಟಿಗಿ ಗ್ರಾಮದ ಬಳಿ ನದಿ ನೀರಿನ ಕೊರತೆಯಿಂದ ಹಿಂಗಾರು ಭತ್ತ ಒಣಗಿರುವುದು
ಕಂಪ್ಲಿ ತಾಲ್ಲೂಕು ಇಟಿಗಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಮೀನುಗಳು ಸತ್ತಿದ್ದು ಮೀನುಗಾರರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ
ಸದ್ಯ ತಾಲ್ಲೂಕಿನಲ್ಲಿ ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿಲ್ಲ. ಮುಂಜಾಗ್ರತೆಯಾಗಿ ಹಲವೆಡೆ ಖಾಸಗಿ ಬೋರ್ ವೆಲ್‍ಗಳನ್ನು ಗುರುತಿಸಲಾಗಿದೆ
ಶಿವರಾಜ, ತಹಶೀಲ್ದಾರ್ ಕಂಪ್ಲಿ
ನೀರಿನ ಪ್ರಮಾಣ ಕಡಿಮೆಯಾದಲ್ಲಿ ನದಿ ವ್ಯಾಪ್ತಿಯಲ್ಲಿರುವ ಮಡುವಿನಲ್ಲಿ(ಕೊಳ್ಳ) ಸಂಗ್ರಹವಿರುವ ನೀರು ಬಳಸಿಕೊಂಡು ಶುದ್ಧೀಕರಣ ಮಾಡಿ ಪೂರೈಸಲು ನಿರ್ಧರಿಸಲಾಗಿದೆ
ಗೊರೆಬಾಳು ರೆಡ್ಡಿ ರಾಯನಗೌಡ, ಮುಖ್ಯಾಧಿಕಾರಿ ಪುರಸಭೆ
ತುಂಗಭದ್ರಾ ನದಿ ಬತ್ತಿರುವುದರಿಂದ ಸುಮಾರು 50ಮೀನುಗಾರರ ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ. ಕೂಡಲೇ ಮನರೇಗಾ ಕೂಲಿ ಆರಂಭಿಸಬೇಕು
- ಮೀನು ಪಕ್ಕೀರಪ್ಪ ಇಟಿಗಿ ಗ್ರಾಮ

ಶೇ 60ರಷ್ಟು ಭತ್ತದ ಬೆಳೆ ನಷ್ಟ

ನದಿ ಪಾತ್ರದಲ್ಲಿ ಹಿಂಗಾರಿನಲ್ಲಿ 4416 ಹೆಕ್ಟೇರ್ ಭತ್ತ ನಾಟಿ ಮಾಡಲಾಗಿತ್ತು. ಕೊನೆ ಗಳಿಗೆಯಲ್ಲಿ ನದಿ ನೀರಿನ ಕೊರತೆ ಮತ್ತು ಹವಾಮಾನ ವೈಪರಿತ್ಯದಿಂದ ಶೇ 60ರಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ಇಳುವರಿ ಎಕರೆಗೆ 25 ಚೀಲ ಲಭಿಸಿದ್ದು ನಿರ್ವಹಣೆಗೆ ಮಾಡಿದ ಖರ್ಚು ಎದುರಾಗಿದೆ ಎಂದು ರೈತರು ಅಸಮಾಧಾನದಿಂದ ತಿಳಿಸಿದರು.

‘ನದಿ ನೀರು ಆಧರಿಸಿ ಮೂರು ಎಕರೆ ಭತ್ತ ನಾಟಿ ಮಾಡಿದ್ದೆ. ಗೊಬ್ಬರ ಕ್ರಿಮಿನಾಶಕ ಸಿಂಪರಣೆ ನಿರ್ವಹಣೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದೆ. ಆದರೆ ಬಿಸಿಲ ಝಳ ನೀರಿನ ಕೊರತೆಯಿಂದ ಭತ್ತದ ಪೈರು ಒಣಗಿ ಹಾಳಾಯಿತು’ ಎಂದು ಸಣಾಪುರ ರೈತ ತಿರುಕಣ್ಣಿ ಶರಣಗೌಡ ಬೇಸರದಿಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.