ADVERTISEMENT

ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು: ಮತ್ತೆ ಮುಳುಗಿದ ಹಂಪಿ ಸ್ಮಾರಕಗಳು

ತುಂಗಾ, ಭದ್ರಾ ಜಲಾಶಯದಿಂದ ಹರಿದು ಬರುತ್ತಿರುವ ಅಪಾರ ನೀರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 7:34 IST
Last Updated 21 ಸೆಪ್ಟೆಂಬರ್ 2020, 7:34 IST
ತುಂಗಭದ್ರಾ ಜಲಾಶಯದಿಂದ ನದಿಗೆ ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ಸೋಮವಾರ ಹಂಪಿಯ ಸ್ನಾನಘಟ್ಟ, ಮಂಟಪ ಸಂಪೂರ್ಣ ಮುಳುಗಿವೆ
ತುಂಗಭದ್ರಾ ಜಲಾಶಯದಿಂದ ನದಿಗೆ ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ಸೋಮವಾರ ಹಂಪಿಯ ಸ್ನಾನಘಟ್ಟ, ಮಂಟಪ ಸಂಪೂರ್ಣ ಮುಳುಗಿವೆ   

ಹೊಸಪೇಟೆ: ಶಿವಮೊಗ್ಗದ ತುಂಗಾ ಮತ್ತು ಭದ್ರಾ ಜಲಾಶಯದಿಂದ ಅಪಾರ ನೀರು ಹೊರ ಬಿಡುತ್ತಿರುವುದರಿಂದ ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ ಒಳಹರಿವು ಸೋಮವಾರ ಸತತ ಎರಡನೇ ದಿನವೂ ಭಾರಿ ಹೆಚ್ಚಳ ಕಂಡಿದೆ.

ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದೆ. ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಭಾನುವಾರವಷ್ಟೇ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿತ್ತು. ಸೋಮವಾರ ಲಕ್ಷ ಕ್ಯುಸೆಕ್‌ ನೀರು ನದಿಯಲ್ಲಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕ, ಸ್ನಾನಘಟ್ಟ, ಚಕ್ರತೀರ್ಥ ಸಂಪೂರ್ಣ ಮುಳುಗಡೆಯಾಗಿದೆ. ರಾಮ–ಲಕ್ಷ್ಮಣ ದೇವಸ್ಥಾನದ ಆವರಣಕ್ಕೆ ನೀರು ಹೊಕ್ಕಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸಂಪೂರ್ಣ ತುಂಬಿದೆ. ತುಂಗಾ ಜಲಾಶಯದಿಂದ 63,796 ಕ್ಯುಸೆಕ್‌, ಭದ್ರಾ ಅಣೆಕಟ್ಟೆಯಿಂದ 50,000 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ 1,06,022 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ಗಳನ್ನು ತೆರೆಯಲಾಗಿದೆ. 20 ಗೇಟ್‌ಗಳನ್ನು ತಲಾ 2.5 ಅಡಿ, ಹತ್ತು ಕ್ರಸ್ಟ್‌ಗೇಟ್‌ಗಳನ್ನು ತಲಾ 2 ಅಡಿ ಮೇಲಕ್ಕೆತ್ತಿ ನದಿಗೆ ನೀರು ಹರಿಸಲಾಗುತ್ತಿದೆ.

ADVERTISEMENT

ಯಾವುದೇ ಕ್ಷಣದಲ್ಲಿ ನದಿಗೆ 1,50,000 ಕ್ಯುಸೆಕ್‌ನಿಂದ 2,00000 ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿಸಲಾಗುವುದು. ನದಿ ಪಾತ್ರ, ಗದ್ದೆಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಈ ಸಂಬಂಧ ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಸೋಮವಾರ ಬೆಳಿಗ್ಗೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯು ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲಾಡಳಿತಗಳಿಗೆ ತಿಳಿಸಿದೆ.

ಆಗಸ್ಟ್‌ನಿಂದ ಇದುವರೆಗೆ ನಾಲ್ಕನೇ ಬಾರಿಗೆ ನದಿಗೆ ನೀರು ಹರಿಸಲಾಗುತ್ತಿದೆ. ಭಾನುವಾರ 20 ಕ್ರಸ್ಟ್‌ಗೇಟ್‌ಗಳಿಂದ 45,670 ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.