ಸಂಡೂರು: ‘ಪಟ್ಟಣದಲ್ಲಿನ ಎಲ್ಲ ಅಂಗವಿಕಲರ ಸಾಮಾಜಿಕ, ಆರ್ಥಿಕ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವುದರ ಜೊತೆಗೆ ಅವರು ಆರ್ಥಿಕ ಸ್ವಾವಲಂಬನೆ ಹೊಂದಲು ಪುರಸಭೆ ಅಧಿಕಾರಿಗಳು ಅನೇಕ ಆರ್ಥಿಕ ಯೋಜನೆಗಳನ್ನು ಜಾರಿಗೆ ತರಬೇಕು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಹೇಳಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಮಂಗಳವಾರ ಪುರಸಭೆಯ ಎಸ್‍ಎಫ್‍ಸಿ ಯೋಜನೆಯ ಅನುದಾನದಲ್ಲಿ ₹10.80 ಲಕ್ಷ ವೆಚ್ಚದಲ್ಲಿ ಖರೀದಿಸಿದ ಎಂಟು ಜನ ಅಂಗವಿಕಲರಿಗೆ ದ್ವಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪಟ್ಟಣದ ವಿವಿಧ ಸಮುದಾಯಗಳ ಜನರ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಪುರಸಭೆಯು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಪಟ್ಟಣದಲ್ಲಿ ಸುಂದರ, ಸ್ವಚ್ಛ ಹಸಿರಿನ ಪರಿಸರಕ್ಕಾಗಿ ಎಲ್ಲ ಜನರ ಸಹಕಾರ ಅಗತ್ಯವಾಗಿದೆ’ ಎಂದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ, ವಾಲ್ಮೀಕಿ ಭವನಗಳಿಗೆ ಪುರಸಭೆಯ ಎಸ್‍ಎಫ್‍ಸಿ ಅನುದಾನದಲ್ಲಿ ₹19.79 ಲಕ್ಷ ವೆಚ್ಚದ ಕುರ್ಚಿಗಳು, ಟೇಬಲ್, ಧ್ವನಿವರ್ಧಕಗಳನ್ನು ವಿತರಿಸಿದರು.
ಪುರಸಭೆಯ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಪುರಸಭೆಯ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವೆಂಕಟೇಶ್, ಮುಖ್ಯಾಧಿಕಾರಿ ಕೆ.ಜಯಣ್ಣ, ಅಧಿಕಾರಿಗಳು, ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.