
ಬಳ್ಳಾರಿ: ‘ನೇಕಾರ ಸಮುದಾಯ ನಿಖರ ಅಂಕಿ ಅಂಶ ಸಂಗ್ರಹಣೆಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ‘ಜಾತಿಗಣತಿ ಸಮೀಕ್ಷೆ’ ನಡೆಸಲಾಗುತ್ತಿದೆ’ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ನೇಕಾರ ಸಮುದಾಯದವರು 6 ಲಕ್ಷ ಜನರಿದ್ದಾರೆ ಎಂದು ಕಾಂತರಾಜ್ ವರದಿ ತಿಳಿಸುತ್ತಿದೆ. ಆದರೆ, ವಾಸ್ತವವಾಗಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದಾರೆ’ ಎಂದರು.
‘ನೇಕಾರ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಮುದಾಯದಿಂದ ಜಾತಿಗಣತಿ ಸಮೀಕ್ಷೆಗಾಗಿ ಆ್ಯಪ್ ಸಿದ್ಧಪಡಿಸಲಾಗಿದೆ. ಈಗಾಗಲೇ ಆಗಸ್ಟ್ ತಿಂಗಳಿಂದ ಜಾತಿಗಣತಿ ಸಮೀಕ್ಷೆ ಆರಂಭವಾಗಿದ್ದು, ಜನವರಿ ಅಂತ್ಯದವರೆಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ. ಈ ಆ್ಯಪ್‌ನಲ್ಲಿ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮಾಹಿತಿಗಳನ್ನು ಒದಗಿಸಬೇಕು. ಸ್ಥಳೀಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮೂಲಕ ನೇಕಾರರನ್ನು ಸಂಪರ್ಕಿಸಿ ಸಮೀಕ್ಷೆಗೆ ಸಹಕರಿಸಬೇಕು’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮುದಾಯದ ಹಿತದೃಷ್ಟಿಯಿಂದ ಪ್ರತ್ಯೇಕ್ಷ ಜಾತಿಗಣತಿ ಮಾಡುತಿದ್ದೇವೆ. ಸರ್ಕಾರವು ಸಾಧ್ಯವಾದಷ್ಟು ಬೇಗ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು. ಜತೆಗೆ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಇತರೆ ರಂಗಗಳಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ದೇವಾನಂದ್, ಪದಾಧಿಕಾರಿಗಳಾದ ಅವ್ವಾರು ಮಂಜುನಾಥ್, ಲಕ್ಷ್ಮಣ, ಶಿವಪ್ಪ ಶೆಟ್ಟಿ, ದಯಾನಂದ್ ಶೆಟ್ಟಿ, ಜಗದೀಶ್, ರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.