ADVERTISEMENT

ಐಸಿಯು ರೋಗಿಗಳಿಗೆ ಸಂಪೂರ್ಣ ದ್ರವಾಹಾರ!

ಜಿಲ್ಲಾಡಳಿತದ ವಿಶೇಷ ಕಾಳಜಿ: ಇಡ್ಲಿ, ಹಾಲು ಬದಲು

ಕೆ.ನರಸಿಂಹ ಮೂರ್ತಿ
Published 17 ಅಕ್ಟೋಬರ್ 2020, 6:03 IST
Last Updated 17 ಅಕ್ಟೋಬರ್ 2020, 6:03 IST
ಐಸಿಯುನಲ್ಲಿರುವ ಕೊರೊನಾ ಸೋಂಕಿತ ವೃದ್ಧೆಯೊಬ್ಬರಿಗೆ ಸಿಬ್ಬಂದಿ ಹಣ್ಣಿನ ರಸವನ್ನು ಕುಡಿಸುತ್ತಿರುವುದು
ಐಸಿಯುನಲ್ಲಿರುವ ಕೊರೊನಾ ಸೋಂಕಿತ ವೃದ್ಧೆಯೊಬ್ಬರಿಗೆ ಸಿಬ್ಬಂದಿ ಹಣ್ಣಿನ ರಸವನ್ನು ಕುಡಿಸುತ್ತಿರುವುದು   

ಬಳ್ಳಾರಿ: ನಗರದ ಟ್ರೌಮಾ ಕೇರ್‌ ಸೆಂಟರ್‌ ಮತ್ತು ಸರ್ಕಾರಿ ದಂತವೈದ್ಯಕೀಯ ಕಾಲೇಜಿನ ಐಸಿಯು ಘಟಕದಲ್ಲಿರುವ ಕೊರೊನಾ ಸೋಂಕಿತರಿಗೆ ಹತ್ತು ದಿನಗಳಿಂದ ಪೌಷ್ಠಿಕವಾದ ದ್ರವಾಹಾರವನ್ನಷ್ಟೇ ಪೂರೈಸಲಾಗುತ್ತಿದೆ. ಮೊದಲು ಪ್ರತಿ ದಿನವೂ ಇಡ್ಲಿ ಮತ್ತು ಹಾಲನ್ನಷ್ಟೇ ಪೂರೈಸಲಾಗುತ್ತಿತ್ತು. ಈಗ ಸೋಂಕಿತರು ದಿನಕ್ಕೆ ಏಳು ಬಾರಿ ದ್ರವಾಹಾರ ಸೇವಿಸುತ್ತಿದ್ದಾರೆ.

ಈಗ ಹಾಲಿನ ಜೊತೆಗೆ, ಕಷಾಯ, ಸೇಬು, ಬಾಳೆ, ಪಪ್ಪಾಯ ಹಾಗೂ ಸಪೋಟ ಹಣ್ಣಿನ ಮಿಲ್ಕ್‌ ಶೇಕ್‌, ಕಿತ್ತಳೆ, ದ್ರಾಕ್ಷಿ ಹಣ್ಣಿನ ರಸ, ಟೊಮೆಟೋ, ಮುಲ್ಲಂಗಿ, ಬೀಟ್‌ರೂಟ್‌ ಸೂಪ್‌, ಅಕ್ಕಿ, ರವೆ ಗಂಜಿ, ಅರಿಸಿಣ ಮತ್ತು ಬಾದಾಮಿ ಹಾಲನ್ನೂ ನೀಡಲಾಗುತ್ತಿದೆ.

‘ಐಸಿಯುನಲ್ಲಿರುವ ರೋಗಿಗಳಲ್ಲಿ ಬಹುತೇಕರು ವೃದ್ಧರಿದ್ದು, ಅವರಿಗೆ ಘನ ಆಹಾರ ಜೀರ್ಣವಾಗದು ಎಂಬ ಕಾರಣಕ್ಕೆ ಮೊದಲು ಇಡ್ಲಿ ಮತ್ತು ಹಾಲನ್ನಷ್ಟೇ ನೀಡಲಾಗುತ್ತಿತ್ತು. ಆದರೆ ಈಗ ದಿನದಲ್ಲಿ ಏಳು ಬಾರಿ ಎಲ್ಲರಿಗೂ ಪೌಷ್ಠಿಕ ದ್ರವಾಹಾರವನ್ನೇ ನೀಡಲಾಗುತ್ತಿದೆ’ ಎಂದು ವಿತರಣೆ ಜವಾಬ್ದಾರಿ ಹೊತ್ತಿರುವ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್‌ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ADVERTISEMENT

‘ಸೋಂಕಿತರು ಕಡಿಮೆ ಅವಧಿಯಲ್ಲಿ ಚೇತರಿಸಿಕೊಳ್ಳಲು ಮತ್ತು ಅವರಲ್ಲಿ ಶಕ್ತಿ ತುಂಬಲು ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಿದ ರಸ ಕೊಡುವುದು ಸೂಕ್ತ ಎಂಬ ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್‌ ಅವರ ಸೂಚನೆ ಮೇರೆಗೆ ಹತ್ತು ದಿನಗಳಿಂದ ಪೂರೈಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.