ADVERTISEMENT

ಕಮಲಾಪುರ ಕೆರೆಯೇಕೇ ತುಂಬುತ್ತಿಲ್ಲ?

ವಿಜಯನಗರ ಅರಸರ ಕಾಲದ ಕೆರೆಯ ನೀರಿನ ಮೂಲಗಳ ಸಂಪರ್ಕ ಕಡಿತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಆಗಸ್ಟ್ 2019, 20:00 IST
Last Updated 14 ಆಗಸ್ಟ್ 2019, 20:00 IST
ಕೆಲ ವರ್ಷಗಳ ಹಿಂದೆ ಸಂಪೂರ್ಣ  ತುಂಬಿದ್ದ ಕಮಲಾಪುರ ಕೆರೆ ನೋಟ–ಸಾಂದರ್ಭಿಕ ಚಿತ್ರ
ಕೆಲ ವರ್ಷಗಳ ಹಿಂದೆ ಸಂಪೂರ್ಣ  ತುಂಬಿದ್ದ ಕಮಲಾಪುರ ಕೆರೆ ನೋಟ–ಸಾಂದರ್ಭಿಕ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಐತಿಹಾಸಿಕ ಕಮಲಾಪುರ ಕೆರೆ ಮಳೆಗಾಲದಲ್ಲೂ ಸಹ ತುಂಬುತ್ತಿಲ್ಲವೇಕೇ? ಇಂತಹದ್ದೊಂದು ಪ್ರಶ್ನೆ ಈಗ ಬಹುತೇಕರನ್ನು ಕಾಡುತ್ತಿದೆ.

ಕೆಲ ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೇ ಇರುವುದು ಒಂದು ಕಾರಣವಾದರೆ, ಕೆರೆಯ ಸುತ್ತಮುತ್ತ ನಡೆಯುತ್ತಿರುವ ಅನೇಕ ರೀತಿಯ ಚಟುವಟಿಕೆಗಳಿಂದ ಅದರ ಜಲಮೂಲಗಳು ಸಂಪರ್ಕ ಕಡಿತಗೊಂಡಿರುವುದು ಪ್ರಮುಖ ಕಾರಣವಾಗಿದೆ.

450 ಎಕರೆ ವಿಸ್ತೀರ್ಣದ ಕೆರೆಯ ಅಲ್ಲಲ್ಲಿ ಅತಿಕ್ರಮಣವಾಗಿದೆ. ಈ ಕುರಿತು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ನೇತೃತ್ವದಲ್ಲಿ ಹೋದ ವರ್ಷ ದೊಡ್ಡ ಹೋರಾಟ ನಡೆದಿತ್ತು. ನಂತರ ಗಡಿ ಗುರುತಿಸುವ ಕೆಲಸವಾಯಿತು. ಆದರೆ, ಸಂಪೂರ್ಣವಾಗಿ ಅತಿಕ್ರಮಣ ತೆರವು ಕೆಲಸ ಪೂರ್ಣಗೊಂಡಿಲ್ಲ.

ADVERTISEMENT

ಕಾರಿಗನೂರು ಹಿಂಭಾಗದ ಸಂಡೂರಿನ ಅರಣ್ಯ ಹಾಗೂ ಬಿಳಿಕಲ್ಲು ಸಂರಕ್ಷಿತ ಅರಣ್ಯದ ಪಶ್ಚಿಮ ವಲಯದಲ್ಲಿ ಮಳೆ ಸುರಿದರೆ ಅದು ನೇರವಾಗಿ ಕೆರೆಗೆ ಬಂದು ಸೇರುತ್ತದೆ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆಯಿಂದ ದೊಡ್ಡ ಪ್ರಮಾಣದ ಹೊಂಡಗಳು ಅಲ್ಲಿ ನಿರ್ಮಾಣವಾಗಿವೆ. ಇದರಿಂದಾಗಿ ಕೆರೆಗೆ ನೀರು ಹರಿದು ಬರುತ್ತಿಲ್ಲ.

ಬಿಳಿಕಲ್ಲು ಸಂರಕ್ಷಿತ ಅರಣ್ಯದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿ ವನ್ಯಜೀವಿಗಳಿಗೆ ಏಳು ಕೆರೆಗಳನ್ನು ನಿರ್ಮಿಸಲಾಗಿದೆ. ಆ ಪರಿಸರದಲ್ಲಿ ಮಳೆಯಾದರೆ ಆ ನೀರು ಕೆರೆಯ ಬದಲಾಗಿ ಹೊಸದಾಗಿ ನಿರ್ಮಿಸಿರುವ ಕೆರೆಗಳಿಗೆ ಸೇರುತ್ತಿದೆ. ಇದೇ ಪ್ರದೇಶದಲ್ಲಿ ರೆಸಾರ್ಟ್‌ಗಳು ಕೂಡ ತಲೆ ಎತ್ತಿದ್ದು, ಅವುಗಳು ವಿಶಾಲ ಪ್ರದೇಶದಲ್ಲಿ ಕೋಟೆ ಮಾದರಿಯಲ್ಲಿ ಎತ್ತರದ ಕಾಂಪೌಂಡ್‌ ನಿರ್ಮಿಸಿವೆ. ಹೀಗೆ ಮಾಡಿರುವುದರಿಂದ ಸೋಮಪ್ಪನ ಕೆರೆ, ಅಕ್ಕಮ್ಮನ ಕೆರೆಯ ನೀರು ಕೆರೆಗೆ ಹರಿಯದಂತೆ ತಡೆದಿವೆ.

ಜಲಾಶಯ ನಿರ್ಮಾಣದ ಬಳಿಕ ಬಲದಂಡೆ ಕೆಳಮಟ್ಟದ ಕಾಲುವೆಗೆ ಗಾಳೆಮ್ಮನ ಗುಡಿಯ ಹತ್ತಿರ ತೂಬು ನಿರ್ಮಿಸಿ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಈಗ ಆ ಜಾಗವನ್ನು ಒತ್ತುವರಿ ಮಾಡಿಕೊಂಡು, ತೂಬಿನಿಂದ ನೀರು ಹರಿಯದಂತೆ ಹಳ್ಳದ ದಾರಿ ಮುಚ್ಚಿ ಕೆಲ ಪ್ರಭಾವಿಗಳು ಕೃಷಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಒಂದುವೇಳೆ ತೂಬು ತೆರೆದರೇ ಅವರು ಅನಧಿಕೃತವಾಗಿ ಮಾಡುತ್ತಿರುವ ಕೃಷಿ ಜಮೀನಿನಲ್ಲಿ ನೀರು ಹೊಕ್ಕುವ ಆತಂಕವಿದೆ.

‘ಹೆಚ್ಚಿನವರಿಗೆ ಕೆರೆಯ ಮಹತ್ವ ಗೊತ್ತಾಗುತ್ತಿಲ್ಲ. ರೈತರಲ್ಲಿ ಒಗ್ಗಟ್ಟಿನ ಕೊರತೆಯಿದ್ದು, ಅದರ ಬಗ್ಗೆ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಹೀಗಾಗಿ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದೇ ರೀತಿಯಾದರೆ ಕೆರೆ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶಿವಕುಮಾರ ಮಾಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.