ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಹೊರವಲಯದ ಕುರಿಹಟ್ಟಿಯ ಮೇಲೆ ಸೋಮವಾರ ಸಂಜೆ ಏಕಾಏಕಿ ದಾಳಿ ನಡೆಸಿದ ತೋಳ, ನಾಯಕರ ಲಿಂಗಪ್ಪ ಅವರಿಗೆ ಸೇರಿದ ಮೂರು ಟಗರು ಮತ್ತು 10 ಕುರಿಗಳನ್ನು ಬಲಿಪಡೆದಿದೆ.
ಘಟನೆಯಲ್ಲಿ ಬಲಿಯಾದ ಟಗರು, ಕುರಿಗಳಿಂದ ಅಂದಾಜು ₹1.20 ಲಕ್ಷ ನಷ್ಟ ಆಗಿದ್ದು, ಪರಿಹಾರ ನೀಡುವಂತೆ ಕುರಿ ಮಾಲೀಕ ಮನವಿ ಮಾಡಿದ್ದಾರೆ.
ಅನೇಕ ದಿನಗಳಿಂದ ಗ್ರಾಮದ ಹೊರ ವಲಯದಲ್ಲಿ ತೋಳದ ಚಲನವಲನವಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಘಟನೆ ಕುರಿತಂತೆ ತಾಲ್ಲೂಕಿನ ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ವೈದ್ಯ ಡಾ. ಪ್ರದೀಪ್‍ಕುಮಾರ್ ಅವರು ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸುವರು. ಅವರು ನೀಡುವ ವರದಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಪಟ್ಟಣದ ಪಶು ಆಸ್ಪತ್ರೆ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿ ಕೆ.ಯು. ಬಸವರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.