ADVERTISEMENT

ಕಂಪ್ಲಿ: ಗೌರಿ ಹುಣ್ಣಿಮೆಗೆ ಹೆಂಗಳೆಯರ ಸಂಭ್ರಮ

ಮಾರುಕಟ್ಟೆಗಳಲ್ಲಿ ಸಕ್ಕರೆ ಗೊಂಬೆಗಳ ಮಾರಾಟ ಜೋರು

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 2 ನವೆಂಬರ್ 2025, 5:30 IST
Last Updated 2 ನವೆಂಬರ್ 2025, 5:30 IST
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಅವರು ಗೌರಿದೇವಿ ಮೂರ್ತಿಗೆ ಬಣ್ಣದ ಅಂತಿಮ ಸ್ಪರ್ಶ ನೀಡುತ್ತಿರುವ ದೃಶ್ಯ
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಅವರು ಗೌರಿದೇವಿ ಮೂರ್ತಿಗೆ ಬಣ್ಣದ ಅಂತಿಮ ಸ್ಪರ್ಶ ನೀಡುತ್ತಿರುವ ದೃಶ್ಯ   

ಕಂಪ್ಲಿ: ಕಾರ್ತಿಕ ಮಾಸದಲ್ಲಿ ಗ್ರಾಮೀಣ ಸೊಗಡನ್ನು ಪ್ರತಿನಿಧಿಸುವ, ಹೆಣ್ಣು ಮಕ್ಕಳಿಗೆ ಸಂಭ್ರಮವನ್ನು ತರುವ ‘ಗೌರಿ ಹುಣ್ಣಿಮೆ’ ಆಚರಣೆ ನ.4ರಿಂದ ಆರಂಭವಾಗಲಿದ್ದು, ಗೌರಿಯನ್ನು ಪಾರ್ವತಿ ಪ್ರತಿರೂಪವಾಗಿ ಪೂಜಿಸಲಾಗುತ್ತದೆ.

ಹಬ್ಬದ ಅಂಗವಾಗಿ ಸ್ಥಳೀಯ ಕಲಾವಿದರ ಕೈಚಳಕದಲ್ಲಿ ತಯಾರಾದ ವಿವಿಧ ಅಳತೆಯ ಗೌರಿದೇವಿ ಮೂರ್ತಿಗಳ ಮಾರಾಟ ಈಗಾಗಲೇ ಶುರುವಾಗಿದೆ. ಮತ್ತೊಂದೆಡೆ ಕಟ್ಟಿಗೆ ಅಚ್ಚುಗಳನ್ನು ಬಳಸಿ ಸಕ್ಕರೆ ಪಾಕದಿಂದ ತಯಾರಿಸಿದ ಗೌರಿದೇವಿ ಮೂರ್ತಿ, ಶಿವ ಪಾರ್ವತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ಕುದುರೆ, ಒಂಟೆ, ಆನೆ, ಅಂಬಾರಿ ಸೇರಿದಂತೆ ಇತ್ಯಾದಿ ಆಕರ್ಷಕ ವೈವಿಧ್ಯಮಯ ಗೊಂಬೆಗಳ ಖರೀದಿಯಲ್ಲಿಯೂ ಜನರು ತೊಡಗಿದ್ದಾರೆ.

ಮಠ, ದೇವಸ್ಥಾನ, ಇನ್ನು ಹಲವೆಡೆ ಗ್ರಾಮದ ಮಠಸ್ಥರ, ಪ್ರಮುಖರ ಮನೆಯಲ್ಲಿ ಗೌರಿದೇವಿ ಮೂರ್ತಿಯನ್ನು ನ.4ರಿಂದ ನ.6ರವರೆಗೆ ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ವಿಶಾಲವಾದ ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಅದರಲ್ಲಿ ದೀಪಗಳನ್ನು ಇರಿಸಿ ಮೆರವಣಿಗೆ ಹೋಗುತ್ತಾರೆ. ಆಗ ಮಕ್ಕಳು ಪಟಾಕಿ ಸಿಡಿಸುತ್ತಾ ಗೌರಿದೇವಿಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ತಲುಪಿ ಭಕ್ತಿಯಿಂದ ಆರತಿ ಬೆಳಗಿ ನಮಿಸುತ್ತಾರೆ.

ADVERTISEMENT

ನ.6ರ ರಾತ್ರಿ ಗೌರಿ ಕುರಿತ ಜನಪದ ಹಾಡುಗಳನ್ನು ಹಾಡಲಾಗುತ್ತದೆ. ಗೌರಿದೇವಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ವಿಸರ್ಜಿಸಲಾಗುತ್ತದೆ.

ಕೊಂತಿ ರೊಟ್ಟಿ ಹಬ್ಬದ ಸಡಗರ

ವಿಶೇಷ ಖಾದ್ಯ ನ.7ರಂದು ಸಂಜೆ ಮನೆಯವರೆಲ್ಲರೂ ಮಾಳಿಗೆ ಮೇಲೆ ಕೊಂತಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ‘ಕೊಂತಿ(ಕೊಂತೆಮ್ಮ) ರೊಟ್ಟಿ’ ಹಬ್ಬವನ್ನು ಆಚರಿಸಲಾಗುತ್ತದೆ. ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆ ರೊಟ್ಟಿ ಬದನೆ ಮತ್ತು ಹೀರೆಕಾಯಿಯಿಂದ ಸಿದ್ಧವಾದ ವಿಶೇಷ ಎಣ್ಣೆಗಾಯಿ ಪುಂಡೆಪಲ್ಯೆ ಹೆಸರುಕಾಳು ಪಲ್ಯೆ ಅನ್ನ ಚಿತ್ರಾನ್ನ ಸಾಂಬಾರು ತೊಗರಿಬೇಳೆ ಗಟ್ಟಿ ಪಪ್ಪು ಗುರೆಳ್ಳುಪುಡಿ ಶೇಂಗಾಚಟ್ನಿ ಮಿರ್ಚಿ ಬಜ್ಜಿ ಸಿಹಿ ಖರ್ಜಿಕಾಯಿ ಸೇರಿದಂತೆ ವಿವಿಧ ರುಚಿಕರ ವಿಶೇಷ ಖಾದ್ಯಗಳನ್ನು ಮನೆಯವರೆಲ್ಲರೂ ಬೆಳದಿಂಗಳಲ್ಲಿ ಸವಿಯುತ್ತಾರೆ. ಬಳಿಕ ಹಿರಿಯರಿಂದ ಹಿಡಿದು ಚಿಕ್ಕವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ನಂತರ ಹತ್ತಿರದ ಬಾವಿ ಕಾಲುವೆಗಳಲ್ಲಿ ಕೊಂತಿ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಅಂದು ರಾತ್ರಿ ಹೆಂಗೆಳೆಯರೆಲ್ಲರೂ ಸೇರಿಕೊಂಡು ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ದಣಿವು ಬಳಿಕ ಮನೆಗೆ ಮರಳಿ ವಿಶ್ರಾಂತಿ ಪಡೆಯುವದರೊಂದಿಗೆ ಈ ವಿಶಿಷ್ಟ ಹಬ್ಬ ಸಂಪನ್ನಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.