ADVERTISEMENT

ಸಮಾನತೆ ಯಾರೋ ಕೊಡುವ ಭಿಕ್ಷೆಯಾಗದಿರಲಿ: ಸಿಂಧು ಅಂಗಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 15:32 IST
Last Updated 14 ಮಾರ್ಚ್ 2021, 15:32 IST
ಸಿಡಿಪಿಒ ಸಿಂಧು ಅಂಗಡಿ (ಎಡದಿಂದ ಏಳನೆಯವರು) ಅವರು ಸಸಿಗೆ ನೀರೆರೆಯುವುದರ ಮೂಲಕ ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು
ಸಿಡಿಪಿಒ ಸಿಂಧು ಅಂಗಡಿ (ಎಡದಿಂದ ಏಳನೆಯವರು) ಅವರು ಸಸಿಗೆ ನೀರೆರೆಯುವುದರ ಮೂಲಕ ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು   

ವಿಜಯನಗರ (ಹೊಸಪೇಟೆ): ‘ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ಯಾರೋ ಕೊಡುವ ಭಿಕ್ಷೆಯಾಗಬಾರದು. ಸಮಗ್ರ ಅಭಿವೃದ್ಧಿಗಾಗಿ ಸಮಾನತೆಯ ಅಗತ್ಯವಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ತಿಳಿಸಿದರು.

ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ, ಸಮುದಾಯ ಕರ್ನಾಟಕ ಹಾಗೂ ಸ್ಫೂರ್ತಿ ವೇದಿಕೆಯ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಬೇಕು, ಬೇಡಗಳನ್ನು ಈಡೇರಿಸುವ ತಾಯಿ ಸ್ವರೂಪಿ ಮಹಿಳೆಯೇ ನಿಜವಾದ ದೇವರು. ಸವಾಲುಗಳನ್ನು ಸ್ವೀಕರಿಸಿ ಅದನ್ನು ದಿಟ್ಟತನದಿಂದ ಎದುರಿಸುವ ಛಲ ಮಹಿಳೆಯರಲ್ಲಿದೆ. ಎಲ್ಲ ಮಹಿಳೆಯರು ಸುಶಿಕ್ಷಿತರಾಗಿ ಮುಖ್ಯವಾಹಿನಿಗೆ ಬರಬೇಕು’ ಎಂದು ಹೇಳಿದರು.

ADVERTISEMENT

ಪ್ರಾಧ್ಯಾಪಕಿ ಕೆ.ನಾಗಪುಷ್ಪಲತಾ ಮಾತನಾಡಿ, ‘ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ವಿಶಿಷ್ಟ ಸಾಧನೆ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಮಹಿಳೆಯರಿಗೆ ಅನುಕಂಪದ ಅಗತ್ಯವಿಲ್ಲ. ಅವಕಾಶದ ಅಗತ್ಯವಿದೆ’ ಎಂದರು.

ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ‘ಮುಟ್ಟು ಮೈಲಿಗೆ ಇಲ್ಲದಿದ್ದರೆ ಜೀವ ಸೃಷ್ಟಿಯಾಗುತ್ತಿರಲಿಲ್ಲ. ಅದನ್ನು ಮುಂದು ಮಾಡಿ ಹೆಣ್ಣನ್ನು ಶೋಷಿಸುತ್ತಿರುವುದು ಸರಿಯಲ್ಲ. ಶರಣರು, ಜನನ ಸೂತಕವನ್ನು ನಿರಾಕರಿಸಿದರು. ಮನಸ್ಸಿನ ಕೊಳೆ ತೆಗೆಯದ ಹೊರತು ಸಮಾಜದ ಉದ್ಧಾರ ಕನಸಿನ ಮಾತು. ಹೆಣ್ಣು ಯಾವತ್ತೂ ಶಾಂತಿಯನ್ನು ಬಯಸುವ ಏಕೈಕ ಅಸ್ತ್ರ. ಶಾಂತಿ ಕದಡಿದ ಕೌರವರು ಉದ್ಧಾರವಾಗಲಿಲ್ಲ’ ಎಂದು ಹೇಳಿದರು.

ಲೇಖಕಿ ಟಿ.ಎಂ.ಉಷಾರಾಣಿ, ‘ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಸುಧಾರಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದರು.

ನಿವೃತ್ತ ವೈದ್ಯಾಧಿಕಾರಿ ಡಾ.ಎಸ್.ಡಿ.ಸುಲೋಚನಾ ಉದ್ಘಾಟಿಸಿದರು. ಸುನೀತಾ ಎಸ್. ಅಣ್ವೆಕರ್, ಸಮುದಾಯ ಕರ್ನಾಟಕದ ಅಧ್ಯಕ್ಷ ದಯಾನಂದ ಕಿನ್ನಾಳ್, ನೌಕರರ ಸಂಘದ ನಾಗರಾಜ ಪತ್ತಾರ್, ತಾಯಪ್ಪ ನಾಯಕ, ಎ.ಕರುಣಾನಿಧಿ, ಜಂಬಯ್ಯ ನಾಯಕ, ಸ್ಫೂರ್ತಿ ವೇದಿಕೆಯ ರವಿ, ‌ಚನ್ನಪ್ಪ ಕಿಚಿಡಿ, ಯು.ಅನುಪಮ, ಎತ್ನಳ್ಳಿ ಮಲ್ಲಯ್ಯ, ಶೀಲಾ ಬಡಿಗೇರ, ರಮ್ಯ, ಸಂತೋಷ ವಡೆ, ವೀರಮ್ಮ ಹಿರೇಮಠ, ವಿಜಯಲಕ್ಷ್ಮಿ, ಗೌತಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.