ADVERTISEMENT

ಶ್ರೀರಾಮುಲು ಮನೆ ಮುಂದೆ ಹೊರಗುತ್ತಿಗೆ ನೌಕರರ ಧರಣಿ: ಸೇವೆಯಲ್ಲಿ ಮುಂದುವರಿಸಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 17:22 IST
Last Updated 11 ಫೆಬ್ರುವರಿ 2020, 17:22 IST
ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಬಳ್ಳಾರಿಯಲ್ಲಿ ಮಂಗಳವಾರ ಸಚಿವ ಬಿ.ಶ್ರೀರಾಮುಲು ಮನೆ ಮುಂದೆ ಧರಣಿ ನಡೆಸಿದರು
ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಬಳ್ಳಾರಿಯಲ್ಲಿ ಮಂಗಳವಾರ ಸಚಿವ ಬಿ.ಶ್ರೀರಾಮುಲು ಮನೆ ಮುಂದೆ ಧರಣಿ ನಡೆಸಿದರು   

ಬಳ್ಳಾರಿ: ‘ಕೆಲಸದಿಂದ ತೆಗೆದಿರುವ ಸಿಬ್ಬಂದಿಯನ್ನು ನಿವೃತ್ತಿವರೆಗೆ ಮುಂದುವರಿಸಬೇಕು, 8 ತಿಂಗಳ ಬಾಕಿ ವೇತನವನ್ನು ನೀಡಬೇಕು’ ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೂರಾರು ಸದಸ್ಯರು ನಗರದಲ್ಲಿ ಮಂಗಳವಾರ ಸಚಿವ ಬಿ.ಶ್ರೀರಾಮುಲು ಮನೆ ಮುಂದೆ ಧರಣಿ ನಡೆಸಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆದ ಕಾರಣ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ.ಸಿಬ್ಬಂದಿಯು ಇ.ಎಸ್.ಐ, ಪಿಎಫ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರಿಸಬೇಕು. ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಆಗ್ರಹಿಸಿದರು.

‘ಸಚಿವರ ಮನೆ ಮುಂದೆ ಧರಣಿ ನಡೆಸಿದಾಗ ಪರಿಹಾರದ ಭರವಸೆ ಸಿಗುತ್ತದೆ. ಆದರೆ ನಂತರ ಅತಂತ್ರ ಸ್ಥಿತಿ ಮುಂದುವರಿಯುತ್ತದೆ. ಈಗ 3ನೇ ಬಾರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಕೆಲಸವೂ ಇಲ್ಲದೇ, ವೇತನವೂ ಇಲ್ಲದೇ ಬದುಕು ಕಷ್ಟಕರವಾಗಿದೆ’ ಎಂದು ಹಾವೇರಿ ಜಿಲ್ಲೆಯ ಶಾಂತಾ ಅಳಲು ತೋಡಿಕೊಂಡರು.

ADVERTISEMENT

ಬೆಂಗಳೂರು, ವಿಜಯಪುರ, ಕಲಬುರಗಿ, ಹಾಸನ, ಚಿಕ್ಕಮಗಳೂರು, ಮಂಗಳೂರು ಸೇರಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದರು. ಧರಣಿ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರೂ ಕೇಳಲಿಲ್ಲ. ‘ಭರವಸೆ ಈಡೇರುವವರೆಗೆ ಧರಣಿ ಕೈಬಿಡುವ ಮಾತೇ ಇಲ್ಲ’ ಎಂದು
ಪ್ರತಿಭಟನಾನಿರತರು ಹೇಳಿದರು.

ಪ್ರತಿಭಟನಕಾರರನ್ನು ರಾತ್ರಿ ಪೊಲೀಸರು ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.