ಕುರುಗೋಡು: ‘ರಾಜಪ್ರಭುತ್ವ ಮತ್ತು ಧರ್ಮಪ್ರಭುತ್ವದ ಮಧ್ಯೆ ಪ್ರಜಾಪ್ರಭುತ್ವ ಬುಡಮೇಲಾಗುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದರು.
ಸಮೀಪದ ಸಿರಿಗೇರಿ ಗ್ರಾಮದಲ್ಲಿ ಸಾಹಿತಿ ಹುಲಿಕಕಟ್ಟಿ ಚನ್ನಬಸಪ್ಪ ಅವರ ‘ಕಲ್ಲಂಗಡಿಯಲ್ಲಿ ಕಂಡ ಭಾರತ’ ಕವನ ಸಂಕಲನ ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರವು ಧರ್ಮ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದೆ. ಇದರಿಂಂದ ಸಮಾಜದ ಕಟ್ಟಕಡೆಯ ವ್ಯಕ್ತಿಯು ಎಲ್ಲರೊಂದಿಗೆ ಪಂಕ್ತಿಯಲ್ಲಿ ಕೂರಬೇಕು ಎನ್ನುವ ಮಹಾತ್ಮ ಗಾಂಧಿ ಅವರು ಕಂಡ ಕನಸು ನನಸಾಗದೆ ಉಳಿದಿದೆ. ನಿರಂಕುಶ ಪ್ರಭುತ್ವದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಸಾಹಿತಿಗಳು, ಚಿಂತಕರು, ಸಾಮಾಜಿಕ ಕಳಕಳಿಯ ವ್ಯಕ್ತಿಗಳು ತಮ್ಮ ಬರಹಗಳ ಮೂಲಕ ಬಿಸಿ ಮುಟ್ಟಿಸುವ ಅಗತ್ಯವಿದೆ’ ಎಂದರು.
ಸಾಹಿತಿ ಹುಲಿಕಟ್ಟಿ ಚೆನ್ನಬಸಪ್ಪ ಮಾತನಾಡಿ, ‘ದೇಶದಲ್ಲಿ ಕೋಮುವಾದ, ಭಯೋತ್ಪಾದನೆ ಮತ್ತು ಜಾತೀಯತೆ ಪ್ರಜಾಪ್ರಭುತ್ವದ ಮೇಲೆ ಮಾರಕ ಪರಿಣಾಮ ಬೀರುತ್ತಿವೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಅನ್ಯಾಯವಾದರೂ ಅದರ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಸಾಹಿತಿಗಳು ಮಾಡಬೇಕು’ ಎಂದದರು.
ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರಿಸ್ವಾಮಿ, ಶಂಭುಲಿಂಗೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಬಸವರಾಜ ಹೂಗಾರ, ಎಚ್.ಎಂ.ಶಶಿಧರ ಸ್ವಾಮಿ, ಕೆ.ಎಂ. ದೇವರಾಜಯ್ಯ ಸ್ವಾಮಿ, ಬಕಾಡೆ ಪಂಪಾಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.