
ಕುರುಗೋಡು: ‘ದೇಶದ ಅಭಿವೃದ್ಧಿ ಯುವಕರನ್ನು ಅವಲಂಬಿಸಿದೆ. ಅವರು ಸದಾ ಕ್ರಿಯಾಶೀಲರಾಗಿರಬೇಕು’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪಟ್ಟಣಸೆರಗು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಗಜಾನನ ಯುವಕ ಸಂಘದ ಬೆಳ್ಳಿ ಮಹೋತ್ಸವ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರು ಸಂಘಟಿತರಾಗಬೇಕು. ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.
ವೈದ್ಯ ಮಧುಸೂದನ್ ಕಾರಿಗನೂರು ಮಾತನಾಡಿ, ‘ಅನ್ಯಭಾಷಿಕರ ಪ್ರಭಾವದಿಂದ ನಗರ ಪ್ರದೇಶಗಳಲ್ಲಿ ತಾಯಿಭಾಷೆ ಕಣ್ಮರೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಮಾತೃಭಾಷೆಯ ಸೊಬಗು ಕಾಣಸಿಗುತ್ತದೆ. ನಾಡು– ನುಡಿ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.
ಸಿಪಿಐ ವಿಶ್ವನಾಥ್ ಹಿರೇಗೌಡರ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಿಮಾತ್ಯ ದುಶ್ಚಟಗಳಿಗೆ ಬಲಿಯಾಗಿ ಅಧ್ಯಯನದಿಂದ ವಿಮುಖರಾಗುತ್ತಿದ್ದಾರೆ. ವಿದ್ಯಾರ್ಥಿಗೆ ಮತ್ತು ಯುವಕರಿಗೆ ಪ್ರೇರಣೆಯಾಗುವ ಕಾರ್ಯಕ್ರಮ ರೂಪಿಸಿರುವುದು ಮಾದರಿಯಾಗಿದೆ. ಗ್ರಾಮದಲ್ಲಿ ಯುವಕರಿಗೆ ಉತ್ಸಾಹ ತುಂಬುವ ಕಾರ್ಯ ನಿರಂತರವಾಗಿರಲಿ’ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಅಲಂಕೃತ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಡೊಳ್ಳು, ಪೂರ್ಣಕುಂಭ, ಕಳಸ, ಮಂಗಳವಾದ್ಯ ಭಾಗವಹಿಸಿ ಮೆರವಣಿಗೆ ಮೆರುಗು ಹೆಚ್ಚಿಸಿದ್ದವು.
ಗ್ರಾಮದಲ್ಲಿ ಓದಿ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ, ಪಿಎಸ್‍ಐ ಸುಪ್ರೀತ್ ವಿರೂಪಕ್ಷಪ್ಪ, ಎಮ್ಮಿಗನೂರು ಜೆಸ್ಕಾಂ ಜೆ.ಇ. ಬಸವರಾಜ್, ಓರ್ವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಗುರುಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ಎನ್. ದೇವರಾಜ್, ಪ್ರಭಾರ ಮುಖ್ಯಶಿಕ್ಷಕ ಮಂಜುನಾಥ್ ಹಾಗೂ ಗಜಾನನ ಯುವಕ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.