ADVERTISEMENT

ರಂಗಭೂಮಿ ಚಲನಶೀಲವಾದುದು: ಶ್ರೀಪಾದ ಹೇಳಿಕೆ

ಯುವರಂಗ ತರಬೇತಿ ಶಿಬಿರದಲ್ಲಿ ಶಿಕ್ಷಣ ತಜ್ಞ ಶ್ರೀಪಾದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 16:23 IST
Last Updated 14 ಫೆಬ್ರುವರಿ 2021, 16:23 IST
ಹೊಸಪೇಟೆಯಲ್ಲಿ ಭಾನುವಾರ ಆರಂಭಗೊಂಡ ಯುವರಂಗ ತರಬೇತಿ ಶಿಬಿರದಲ್ಲಿ ಭಾವೈಕ್ಯತಾ ವೇದಿಕೆಯ ಲೋಗೋ ಅನ್ನು ಶಿಕ್ಷಣ ತಜ್ಞ ಬಿ. ಶ್ರೀಪಾದ (ಎಡದಿಂದ ನಾಲ್ಕನೆಯವರು) ಅನಾವರಣಗೊಳಿಸಿದರು
ಹೊಸಪೇಟೆಯಲ್ಲಿ ಭಾನುವಾರ ಆರಂಭಗೊಂಡ ಯುವರಂಗ ತರಬೇತಿ ಶಿಬಿರದಲ್ಲಿ ಭಾವೈಕ್ಯತಾ ವೇದಿಕೆಯ ಲೋಗೋ ಅನ್ನು ಶಿಕ್ಷಣ ತಜ್ಞ ಬಿ. ಶ್ರೀಪಾದ (ಎಡದಿಂದ ನಾಲ್ಕನೆಯವರು) ಅನಾವರಣಗೊಳಿಸಿದರು   

ವಿಜಯನಗರ (ಹೊಸಪೇಟೆ): ‘ರಂಗಭೂಮಿ ಸದಾ ಚಲನಶೀಲವಾದುದು. ಅದು ನಿಂತ ನೀರಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡುವ ಗುಣ ಹೊಂದಿದೆ’ ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ ಹೇಳಿದರು.

ಭಾವೈಕ್ಯತಾ ವೇದಿಕೆಯಿಂದ ಹಮ್ಮಿಕೊಂಡಿರುವ 40 ದಿನಗಳ ಯುವರಂಗ ತರಬೇತಿ ಶಿಬಿರ–2021ಕ್ಕೆ ಭಾನುವಾರ ನಗರದ ಸಂತ ಶಿಶುನಾಳ ಷರೀಫ ರಂಗಮಂದಿರದಲ್ಲಿ ಚಾಲನೆ ಕೊಟ್ಟು ಮಾತನಾಡಿದರು.

‘ಆಯಾ ಕಾಲಕ್ಕೆ ತಕ್ಕಂತೆ, ಅಂದಿನ ಸ್ಥಿತಿಗತಿಗೆ ಅನುಗುಣವಾಗಿ ಪ್ರಯೋಗಗಳನ್ನು ನಾಟಕಗಳಲ್ಲಿ ಮಾಡಬಹುದು. ಇಷ್ಟೊಂದು ಶಕ್ತಿ ಇರುವ ರಂಗಭೂಮಿಯ ಕುರಿತು ಶಾಲೆಗಳಲ್ಲಿ ತಿಳಿಸುವ ಕೆಲಸವಾಗುತ್ತಿಲ್ಲ. ರಂಗಶಿಕ್ಷಕರು ಇರದೇ ಇರುವುದರಿಂದ ರಂಗಭೂಮಿಯ ಮಹತ್ವ ಹೊಸ ಪೀಳಿಗೆಗೆ ಗೊತ್ತಾಗುತ್ತಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ರಾಜಕುಮಾರ ಅವರು ಮೇರುನಾಟನಾಗಲು ಸಾಧ್ಯವಾದದ್ದು ರಂಗಭೂಮಿಯ ಹಿನ್ನೆಲೆ, ಪ್ರಭಾವದಿಂದ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅನೇಕ ಮೇರುನಟರೆಲ್ಲ ರಂಗಭೂಮಿಯಿಂದ ಬಂದವರೇ ಆಗಿದ್ದಾರೆ. ಇಂದು ವೃತ್ತಿ ರಂಗಭೂಮಿ ಬದುಕಿಗೆ ಸೀಮಿತವಾದರೆ, ಹವ್ಯಾಸಿ ರಂಗಭೂಮಿ ಹವ್ಯಾಸ, ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುವ ಮುಖೇನ ಸಹಬಾಳ್ವೆ ಸಹ ಕಲಿಯಬಹುದು’ ಎಂದು ತಿಳಿಸಿದರು.

‘ರಂಗ ಚಟುವಟಿಕೆಗಳು ಬಹಳ ವಿಭಿನ್ನ. ಸಮಾಜದ ಎಲ್ಲ ಸ್ತರದವರಿಗೆ ಸಮಾನ ಅವಕಾಶ ಸಿಗುವ ವೇದಿಕೆಯಿದು. ಮೇಲು–ಕೀಳಿಗೆ ಅವಕಾಶವಿಲ್ಲ. ಭಾವೈಕ್ಯತೆ ವೇದಿಕೆಯು ಸ್ಲಂನಲ್ಲಿದ್ದುಕೊಂಡೇ ಸಮಾಜದ ಕೆಳಸ್ತರದ ಮಕ್ಕಳಿಗೆ ತರಬೇತಿ ಕೊಟ್ಟು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವುದು ಅಭಿನಂದನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗಕರ್ಮಿ ಮಾ.ಬ. ಸೋಮಣ್ಣ, ‘ರಂಗಭೂಮಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತದೆ. ಸೃಜನಶೀಲ, ಕ್ರಿಯಾಶೀಲ ವ್ಯಕ್ತಿಯಾಗಿ ಬದಲಾಗುತ್ತಾನೆ’ ಎಂದರು.

ಭಾವೈಕ್ಯತಾ ವೇದಿಕೆಯ ಸಂಚಾಲಕ ಪಿ. ಅಬ್ದುಲ್‌ ಮಾತನಾಡಿ, ‘ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಗಂಭೀರತೆ ಇರಬೇಕು. ನಾಟಕದಲ್ಲಿ ಯಾವ ಪಾತ್ರ ಚಿಕ್ಕದು, ದೊಡ್ಡದು ಇರುವುದಿಲ್ಲ. ಅದರಲ್ಲಿ ನಾವು ಎಷ್ಟರಮಟ್ಟಿಗೆ ತೊಡಗಿಸಿಕೊಂಡು, ಪ್ರಯೋಗಗಳಿಗೆ ಒಳಪಡುತ್ತೇವೆ ಎನ್ನುವುದು ಬಹಳ ಮುಖ್ಯ’ ಎಂದು ಹೇಳಿದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ಥಿಯೊಸಫಿಕಲ್‌ ಕಾಲೇಜಿನ ಡಿ.ಎನ್‌. ಸುಜಾತ, ಎಚ್‌.ಇ. ಫೌಂಡೇಶನ್‌ ಮ್ಯಾನೇಜಿಂಗ್‌ ಟ್ರಸ್ಟಿ ಎಚ್‌.ಇ. ದಾದಾ ಕಲಂದರ್‌, ಶಿಬಿರದ ನಿರ್ದೇಶಕರಾದ ರಿಯಾಜ್‌ ಸಿಹಿಮೊಗೆ, ಸಹನಾ, ಯೂನುಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.