ADVERTISEMENT

ಆತ್ಮಹತ್ಯೆಗೆ ಜನಪದ ಮೌಲ್ಯ ಪರಿಹಾರ

ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:04 IST
Last Updated 5 ಡಿಸೆಂಬರ್ 2012, 5:04 IST

ದೊಡ್ಡಬಳ್ಳಾಪುರ: ಬದುಕಿನಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳದೇ ಆತ್ಮಹತ್ಯೆಗೆ ಶರಣಾಗುವ ಇಂದಿನ ಸುಶಿಕ್ಷಿತರು ಜನಪದರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಕೋಲಿಗೆರೆಯಲ್ಲಿ ಜಾನಪದ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಜಾನಪದ ಜಾಗೃತಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಮತ್ತು ಜಾನಪದ ಇಂದು ಕಡೆಗಣನೆಯ ವಿಚಾರಗಳಾಗಿರುವುದು ವಿಷಾದಕರ. ಇಂಗ್ಲಿಷ್ ಭಾಷೆ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಪ್ರತಿಭೆಯಿದ್ದರೂ ಅದನ್ನು ಹೊರಹೊಮ್ಮಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಣವನ್ನು ಪಡೆದುಕೊಂಡಿರುವರು ಬದುಕಿನ ಕ್ಷಣಿಕ ಕಷ್ಟಗಳನ್ನು ಎದುರಿಸಲಾಗಿದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಜನಪದರು ದೇವಾಲಯ ಕಟ್ಟುವುದಕ್ಕಿಂತ ಕೆರೆ, ಕುಂಟೆ ನಿರ್ಮಾಣಗಳಂತಹ ಜನೋಪಕಾರಿ ಕೆಲಸಗಳನ್ನು ಹಿಂದೆ ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದರು. ಅವರ ಸಾಮಾಜಿಕ ಕಾಳಜಿ, ಮಾನವೀಯತೆಯನ್ನು ನಾವು ಅರ್ಥಮಾಡಿಕೊಂಡು ಜನಪದ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ನಮ್ಮ ಕಲೆ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ರೂಪಿಸುವುದು ಮುಖ್ಯ. ಬದುಕಿನಲ್ಲಿ ಆತ್ಮವಿಶ್ವಾಸ, ಛಲ ಇರಬೇಕು ಎಂದರು.

ಕೋಲಿಗೆರೆಯ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆಂಪಹನುಮಯ್ಯ, ಡಾ. ಅಂಬೇಡ್ಕರ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ. ಸೋಮಶೇಖರಮೂರ್ತಿ, ಸತೀಶ್ಚಂದ್ರ ಸ್ಮಾರಕ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಆಂಜನೇಯಮೂರ್ತಿ, ಮುಖ್ಯ ಶಿಕ್ಷಕ ನಾಗಪ್ಪ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾಲತಂಡಗಳಿಂದ ಜಾನಪದ ಕಲಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.