ADVERTISEMENT

ಆನೇಕಲ್: ಸಹಕಾರಿ ಬ್ಯಾಂಕ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಆನೇಕಲ್:  ಆನೇಕಲ್ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುವ ಮೂಲಕ ರಾಜ್ಯದಲ್ಲಿಯೇ 7ನೇ ಸ್ಥಾನದಲ್ಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಿ.ಆಂಜಿನಪ್ಪ ನುಡಿದರು.

ಅವರು ಪಟ್ಟಣದ ಸ್ವರ್ಣಮಹೋತ್ಸವ ಭವನದಲ್ಲಿ ಆಯೋಜಿಸಿದ್ದ 73ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್ ರೈತಪರ ಕಾಳಜಿ ಹೊಂದಿದ್ದು, ರೈತರು ಪಡೆದ ಸಾಲಗಳನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲದ ಕಂತುಗಳನ್ನು ಮರುಪಾವತಿ ಮಾಡಿದರೆ ಮತ್ತಷ್ಟು ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬಹುದು ಎಂದರು.

ವ್ಯವಸಾಯ ಜಮೀನಿನ ಸಾಗುವಳಿ ಪದ್ಧತಿ ಸುಧಾರಣೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೃಷಿ ಯಾಂತ್ರೀಕರಣ, ಬೆಳೆಸಾಲ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಾಲ ಸೌಲಭ್ಯಗಳನ್ನು ಬ್ಯಾಂಕ್ ವತಿಯಿಂದ ನೀಡಲಾಗುತ್ತಿದೆ. ಈ ಸಾಲಿನಲ್ಲಿ ಬ್ಯಾಂಕ್ 20.4ಲಕ್ಷ ರೂ. ಲಾಭಗಳಿಸಿದ್ದು, ಸಾಲ ವಸೂಲಾತಿಯಲ್ಲಿ ಶೇ.81ರಷ್ಟು ಪ್ರಗತಿ ಸಾಧಿಸಿದೆ. ಶೇ.100ರಷ್ಟು ಸಾಲ ವಸೂಲಾತಿ ಗುರಿಯನ್ನು ಸಂಸ್ಥೆ ಹೊಂದಿದೆ ಎಂದರು. ಯಶಸ್ವಿನಿ ಯೋಜನೆಯಡಿ 1352 ಮಂದಿ ಸದಸ್ಯರನ್ನು ವಿಮಾದಾರರನ್ನಾಗಿ ಮಾಡಿರುವುದು ಬ್ಯಾಂಕ್‌ನ ಹೆಗ್ಗಳಿಕೆಯಾಗಿದೆ ಎಂದರು. 

ಬ್ಯಾಂಕ್‌ನ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ ರೈತರ ಸಹಕಾರದಿಂದ 73 ವರ್ಷಗಳಿಂದ ಬ್ಯಾಂಕ್ ನಡೆದುಕೊಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ಲಾಭದಾಯಕವಾಗಿ ನಡೆಯುತ್ತಿದೆ. ಕಟ್ಟಡದ ಅಭಿವೃದ್ಧಿಗಾಗಿ ಅಧ್ಯಕ್ಷರು ಸ್ವಂತ ವೆಚ್ಚದಿಂದ 3.5 ಲಕ್ಷ ರೂ. ವೆಚ್ಚಮಾಡಿರುವುದು ಶ್ಲಾಘನೀಯ ಎಂದರು.ಎಸ್‌ಎಸ್‌ಎಲ್‌ಸಿಯಲ್ಲಿ ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು. ಬ್ಯಾಂಕ್‌ಗೆ ನಿಯಮಿತವಾಗಿ ಸಾಲ ಮರುಪಾವತಿ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ವೈ.ವೆಂಕಟರಾಜು 2010-11ನೇ ಸಾಲಿನ ಆಡಳಿತ ಹಾಗೂ ಲೆಕ್ಕಪರಿಶೋಧನೆ ವರದಿಯನ್ನು ಮಂಡನೆ ಮಾಡಿದರು.ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಮುನಿರೆಡ್ಡಿ, ನಿರ್ದೇಶಕರಾದ ಗೋಪಸಂದ್ರ ಗೋಪಾಲರೆಡ್ಡಿ, ಸೋಲೂರು ಸೀನಪ್ಪ, ಆರ್.ಸೋಮಶೇಖರರೆಡ್ಡಿ, ಚಂದ್ರಮ್ಮ ಮತ್ತಿತರರು ಹಾಜರಿದ್ದರು.

ಲೈನ್‌ಮನ್ ಸಾವು
ಆನೇಕಲ್:ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈನ್‌ಮನ್ ಒಬ್ಬರಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಕದರಿಸ್ವಾಮಿ (36) ಎಂದು ಗುರುತಿಸಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿಕ ಕ್ರಮ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.