ದೊಡ್ಡಬಳ್ಳಾಪುರ: ಇಂದು ಇಂಗ್ಲಿಷ್ ಭಾಷೆ ಕಲಿಕೆ ಅನಿವಾರ್ಯ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯದೇ ಶಿಕ್ಷಣದಲ್ಲಿ ಅಸಮಾನತೆ ಅನುಭವಿಸುತ್ತಿದ್ದಾರೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು ಹೇಳಿದರು.
ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಕನ್ನಡ ಸೇನೆ ರಾಜ್ಯ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಹೋರಾಟಗಾರರಿಗೆ ಕಾಳಜಿ ಇದ್ದರೇ ಮೊದಲು ಕಾನ್ವೆಂಟ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸುವ ಬಗ್ಗೆ ಹೋರಾಟ ರೂಪಿಸಲಿ ಎಂದರು. ರಾಜ್ಯ ಸರ್ಕಾರದ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಕ್ರಮವನ್ನು ವಿರೋಧಿಸುತ್ತಿರುವ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಸರ್ಕಾರಿ ಶಾಲೆಯಲ್ಲಿನ ಬಡವರ ಮಕ್ಕಳು ಆಂಗ್ಲಭಾಷೆ ಕಲಿಯಬಾರದು ಎಂಬ ಹುನ್ನಾರ ನಡೆಸುತ್ತಿದ್ದಾರೆ.
ಇವರು ಮೊದಲು ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ಒಂದು ಜಾತಿಗೆ ಮಾತ್ರ ಸೀಮಿತವಲ್ಲ. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಎಲ್ಲರು ಅಳವಡಿಸಿಕೊಳ್ಳಬೇಕು ಎಂದರು.
ಶಿವಸಾಯಿಬಾಬಾ ಮಾತನಾಡಿ, ನಾಡನ್ನು ಕಟ್ಟಲು ಕೆಂಪೇಗೌಡರು ಪಟ್ಟ ಶ್ರಮ, ತ್ಯಾಗ ಇಂದಿನ ಪೀಳಿಗೆಗೆ ಆದರ್ಶವಾಗಬೇಕು. ಸಮಾಜದ ಹಿತ ಬಯಸುವ ಸಂಘಟನೆಗಳಿಗೆ ಜನ ಸಮುದಾಯ ಉತ್ತೇಜನ ನೀಡಬೇಕು ಎಂದರು.
ಸಮಾರಂಭದಲ್ಲಿ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಕೆಂಪೇಗೌಡ ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಯೋಗೇಶ್ ಗೌಡ, ಉಪಾಧ್ಯಕ್ಷ ಸಂಪ್ ಕುಮಾರ್, ಕಾರ್ಯದರ್ಶಿ ಶಿವಕುಮಾರ್, ಪಾಪಣ್ಣ, ಜೆಡಿಎಸ್ ಮುಖಂಡರಾದ ಮಲ್ಲೇಶ್, ನಾಗಣ್ಣ, ಜಿಲ್ಲಾ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಮುನಿಯಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.