ಆನೇಕಲ್ : ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿ ಕೊಂಡರೆ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್ ಬಾನೋಥ್ ನುಡಿದರು.
ಅವರು ಪಟ್ಟಣದ ವಿಧಾತ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿ ಪೊಲೀಸ್ ಫೋರ್ಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಗುರಿ ಮುಖ್ಯ, ಗುರಿ ಸಾಧನೆಗಾಗಿ ಸನ್ಮಾರ್ಗವನ್ನು ಹುಡುಕಿಕೊಳ್ಳಬೇಕು. ಉತ್ತಮ ಗುರಿಯನ್ನು ಹೊಂದಿದ್ದರೆ ಕೆಟ್ಟ ಘಟನೆಗಳು ನಡೆಯುವುದಿಲ್ಲ. ಸಮಾಜ ಘಾತುಕ ಶಕ್ತಿಗಳನ್ನು ಸದೆ ಬಡಿಯಲು ವಿದ್ಯಾರ್ಥಿಗಳು ಪೊಲೀಸರೊಂದಿಗೆ ಕೈ ಜೋಡಿಸಬೇಕು. ಅಪರಾಧಗಳು ನಡೆದಾಗ ಮಾಹಿತಿ ನೀಡಬೇಕು ಎಂದರು.
ವಿಧಾತ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ತಾ.ನಂ.ಕುಮಾರಸ್ವಾಮಿ ಮಾತನಾಡಿ, ವಿಧಾತ್ ವಿದ್ಯಾ ಸಂಸ್ಥೆ ಜನಪರವಾಗಿ ಚಿಂತನೆ ಮಾಡುವ ಸಂಸ್ಥೆಯಾಗಿದೆ ಎಂದರು. ಡಿವೈಎಸ್ಪಿ ಬಲರಾಮೇಗೌಡ, ಪುರಸಭಾ ಅಧ್ಯಕ್ಷ ಎನ್.ಎಸ್.ಅಶ್ವಥನಾರಾಯಣ, ಪಿಎಸ್‌ಐ ಲಕ್ಷ್ಮೀಕಾಂತ್, ವಿಧಾತ್ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ವಿಧಾತ್, ಮುಖ್ಯೋಪಾಧ್ಯಾಯ ಎಸ್. ರೇಣುಕಾರಾಧ್ಯ, ನಿವೃತ್ತ ಮುಖ್ಯ ಶಿಕ್ಷಕರಾದ ವೆಂಕಟೇಶ್ ರೆಡ್ಡಿ, ನಾಗರಾಜು ಹಾಜರಿದ್ದರು. ಕಳೆದ ಒಂದು ವಾರದಿಂದ 65 ವಿದ್ಯಾರ್ಥಿಗಳಿಗೆ ವಿಧಾತ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿ ಪೊಲೀಸ್ ಫೋರ್ಸ್‌ನ ಬಗ್ಗೆ ತರಬೇತಿಯನ್ನು ನೀಡಿದ ಮಹಂತೇಶ್ ಗುಣಕಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.