ADVERTISEMENT

ಜೈವಿಕ ಘಟಕ: ರಾಜ್ಯವೂ ನೆರವು ನೀಡಲಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2012, 19:30 IST
Last Updated 29 ಜನವರಿ 2012, 19:30 IST
ಜೈವಿಕ ಘಟಕ: ರಾಜ್ಯವೂ ನೆರವು ನೀಡಲಿ
ಜೈವಿಕ ಘಟಕ: ರಾಜ್ಯವೂ ನೆರವು ನೀಡಲಿ   

ದೊಡ್ಡಬಳ್ಳಾಪುರ: `ರೈತರು ನಿರ್ಮಿಸುವ ಜೈವಿಕ ಅನಿಲ ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನೀಡುವ ಸಹಾಯದನದ ಜೊತೆಗೆ ರಾಜ್ಯ ಸರ್ಕಾರವು ಸಹ ಸಹಾಯದನ ನೀಡುವ ಮೂಲಕ ಪರ್ಯಾಯ ಇಂಧನ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು~ ಎಂದು ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ ಹೇಳಿದರು.

ಅವರು ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ಥಾಪಿಸಿರುವ ಜೈವಿಕ ಅನಿಲ ಉತ್ಪಾದನೆ, ಶುದ್ಧೀಕರಣ ಹಾಗೂ ಸಿಲಿಂಡರ್‌ನಲ್ಲಿ ಶೇಖರಿಸುವ ಘಟಕ ಉದ್ಘಾಟಿಸಿ ಮಾತನಾಡಿದರು.

`ಜೈವಿಕ ಅನಿಲ ಘಟಕ ಸ್ಥಾಪನೆ ಮಾಡುವ ರೈತರಿಗೆ ಕೇಂದ್ರ ಸರ್ಕಾರ ಶೇ.50 ರಷ್ಟು ಆರ್ಥಿಕ ನೆರವು ನೀಡುತ್ತಿದೆ. ರಾಜ್ಯ ಸರ್ಕಾರವು ಸಹ ಈ ಘಟಕಗಳಿಗೆ ಆರ್ಥಿಕ ನೆರವು ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯಲಾಗುವುದು~ ಎಂದು ಹೇಳಿದರು.

`ಕೃಷಿಯಲ್ಲಿ ದೊರೆಯುವ ತರಕಾರಿ ತ್ಯಾಜ್ಯ, ಸಗಣಿ, ಕೋಳಿ, ಕುರಿ, ಮೇಕೆ ಗೊಬ್ಬರ ಹಾಗೂ ಗುಲಾಬಿ ಹೂಗಳ ಪಕಳೆಗಳಿಂದ ವಾಣಿಜ್ಯ ಉದ್ದೇಶಕ್ಕಾಗಿಯೂ ಜೈವಿಕ ಅನಿಲವನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವುದು ಶ್ಲಾಘನೀಯ~ ಎಂದು ಹೇಳಿದರು.

ಜೈವಿಕ ಅನಿಲ ಘಟಕ ಸ್ಥಾಪಿಸಿರುವ ಟಿ.ಆನಂದ್ ಜೈವಿಕ ಘಟಕ ಕುರಿತು ಮಾಹಿತಿ ನೀಡಿ, 1.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಲಾಗಿರುವ ಈ ಘಟಕದಿಂದ ಪ್ರತಿದಿನ ಒಂದು ಸಾವಿರ ಕ್ಯುಬಿಕ್ ಮೀಟರ್‌ನಷ್ಟು ಜೈವಿಕ ಅನಿಲ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ 18 ರಿಂದ 20 ಟನ್‌ವರೆಗೆ ಸಗಣಿ, ಕೋಳಿ ಗೊಬ್ಬರ ಸೇರಿದಂತೆ ಇತರೆ ತ್ಯಾಜ್ಯ ಅಗತ್ಯವಾಗಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲ್ಪನಾ ಆನಂದ್, ಶಾಸಕ ಎಂ.ವೆಂಕಟಸ್ವಾಮಿ, ಎನ್.ಸಂಪಂಗಿ, ಕೃಷ್ಣಬೈರೇಗೌಡ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಗೋವಿಂದರಾಜ್, ನಗರ ಬ್ಲಾಕ್ ಅಧ್ಯಕ್ಷ ತಿ.ರಂಗರಾಜು, ಯುವ ಘಟಕದ ಅಧ್ಯಕ್ಷ ವೆಂಕಟೇಶ್,ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಘಟಕದ ಉಪಾಧ್ಯಕ್ಷ ಡಿ.ಸಿ.ಶಶಿಧರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಗೋವಿಂದರಾಜ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.