ADVERTISEMENT

ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:21 IST
Last Updated 24 ಅಕ್ಟೋಬರ್ 2017, 5:21 IST

ವಿಜಯಪುರ: ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಗೊಳಿಸುವ ಮೂಲಕ ಈ ಭಾಗದಲ್ಲಿ ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಲು ಮುಂದಾಗಬೇಕು ಎಂದು ಐಬಸಾಪುರ ನಿವಾಸಿಗಳಾದ ಶಂಕರಪ್ಪ, ಚಂದ್ರಪ್ರಕಾಶ್, ರಾಜಣ್ಣ, ಒತ್ತಾಯಿಸಿದ್ದಾರೆ.

ಈ ನದಿಗೆ ‘ದಕ್ಷಿಣ ಪೆನ್ನಾರ್’ ಎಂದು ಕರೆಯುವ ರೂಢಿ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ವಾಯುವ್ಯಕ್ಕೆ ಇರುವ ಚನ್ನರಾಯನ ಬೆಟ್ಟದಲ್ಲಿ ಹುಟ್ಟುವ ಈ ನದಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿದು ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ದಕ್ಷಿಣದಲ್ಲಿ ಪ್ರವೇಶಿಸುತ್ತದೆ.

ಮುಂದೆ ಐಬಸಾಪುರದ ಮೂಲಕ ಹೊಸಕೋಟೆ ತಾಲ್ಲೂಕು ದಾಟಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಜಂಗಮಕೋಟೆಯ ಭದ್ರನಕೆರೆ ಮತ್ತು ಹೊಸಕೋಟೆ ಕೆರೆ ಈ ನದಿಗೆ ಅಡ್ಡಲಾಗಿ ಕಟ್ಟಿರುವ ಕೆರೆಗಳು. ಅಲ್ಲದೆ ಅಲ್ಲಲ್ಲಿ ಸಣ್ಣ ಕೆರೆಗಳು ಮತ್ತು ಒಡ್ಡುಗಳೂ ಇವೆ.

ADVERTISEMENT

ನದಿಯನ್ನು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಹರಿಯುವ ನೀರು ನದಿಯ ಆಸುಪಾಸಿನಲ್ಲಿರುವ ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೊತ್ತದ ಬೆಳೆ ನಾಶವಾಗಿದೆ.

‘ನದಿಯ ಒತ್ತುವರಿಯನ್ನು ತೆರವುಗೊಳಿಸಿ, ಮಳೆಗಾಲದಲ್ಲಿ ನೀರು ಹರಿಯಲು ಅನು ಕೂಲ ಮಾಡಿ ಕೊ ಡುವಂತೆ ಜಿಲ್ಲಾ ಧಿಕಾರಿ, ತಹಶೀಲ್ದಾರ್ ಅವರಿಗೆ ನಕ್ಷೆ ಮತ್ತು ದಾಖಲೆಗಳ ಸಮೇತ ಅನೇಕ ಬಾರಿಗೆ ಮನವಿ ಕೊಟ್ಟಿದ್ದೇವೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮನವಿಗಳನ್ನು ಕೊಟ್ಟು ಎರಡು ವರ್ಷಗಳಾಗಿವೆ. ಇದುವರೆಗೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ, ಕೆಲವು ಕಡೆ 120 ಅಡಿಗಳ ಜಾಗವಿದೆ, ಕೆಲವು 70, 30 ಅಡಿಗಳು ಹೀಗೆ ಭೂಮಿ ಒತ್ತುವರಿಯಾಗಿದೆ ಎಂದಿದ್ದಾರೆ.

ಈಚೆಗೆ ಬಿದ್ದ ಮಳೆಯಿಂದ ಬಂದಂತಹ ನೀರು ಕಾಲುವೆಯಲ್ಲಿ ಹರಿ ಯಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿರುವ ತೋಟಗಳಿಗೆ ನೀರು ನುಗ್ಗಿದ್ದರಿಂದ ಬೀಟ್‌ರೂಟ್‌, ಪಪ್ಪಾಯ ಬೆಳೆಗಳು, ರಾಗಿ ಬೆಳೆಗೆ ಹಾನಿ ಸಂಭವಿಸಿದೆ.

ಕಾಲುವೆಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಕಾಲುವೆಯಲ್ಲಿ ಮುಚ್ಚಿಹೋಗಿರುವ ಮಣ್ಣನ್ನು ತೆಗೆದು ನಕಾಶೆಯಲ್ಲಿರುವ ಅಳತೆಯ ಪ್ರಕಾರ ನದಿಯನ್ನು ಪುನಶ್ಚೇತನಗೊಳಿಸಬೇಕು.ಇದರಿಂದ ಸುತ್ತಲಿನ ಕೊಳವೆಬಾವಿಗಳು, ತೋಡು ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ರೈತರಿಗೆ ಅನುಕೂ ಐಲವಾಗಲಿದೆ ಎಂದು ಆಗ್ರಹಿಸಲಾಗಿದೆ.

ಈಗಾಗಲೇ ಕೆರೆಗಳನ್ನು ಸರ್ವೇ ಮಾಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು, ಇಂತಹ ರಾಜಕಾಲುವೆಗಳು, ನದಿಯ ಜಾಗಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದಿದ್ದಾರೆ. ಹಲವು ಕಡೆಗಳಲ್ಲಿ ನದಿಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳನ್ನು ನಿರ್ಮಿಸಿ ಲಾಭಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.