ADVERTISEMENT

ದುಶ್ಚಟಗಳಿಗೆ ದಾಸರಾಗಬೇಡಿ: ಕಾರ್ಮಿಕರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 8:43 IST
Last Updated 11 ಮಾರ್ಚ್ 2014, 8:43 IST

ದೊಡ್ಡಬಳ್ಳಾಪುರ: ಕಾರ್ಮಿಕ ಕಲ್ಯಾಣ ಮಂಡಳಿಯು ಕಟ್ಟಡ ಕೂಲಿ ಕಾರ್ಮಿಕರಿಗಾಗಿ ಹಲವಾರು ನೆರವಿನ ಯೋಜನೆಗಳನ್ನು ರೂಪಿಸಿದೆ. ಅರ್ಹರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಿರಿಯ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಡಿ.ಪಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ದಿ ಲೀಗಲ್ ಪ್ರೊಫೆಷನಲ್ಸ್ ಫೋರಂ, ಕಾರ್ಮಿಕ ಇಲಾಖೆ, ಸಿಮಿಜು ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ಸಹಯೋಗ­ದೊಂದಿಗೆ ಜವಳಿ ಪಾರ್ಕ್‌ನಲ್ಲಿ ಕಟ್ಟಡ ಕೂಲಿ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಟ್ಟಡ ಕೂಲಿ ಕಾರ್ಮಿಕರು ಬೆವರು ಸುರಿಸಿ ದುಡಿದರೂ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಇದನ್ನು ಅರಿತ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆ ಮೂಲಕ ಕಟ್ಟಡ ಕಾರ್ಮಿಕರು ಹಲವು ರೀತಿಯ ನೆರವು ನೀಡುತ್ತಿದೆ. ಕಾರ್ಮಿಕ ಇಲಾಖೆ ರೂಪಿಸಿರುವ ಯೋಜನೆಗಳಿಂದ ಕಟ್ಟಡ ಕಾರ್ಮಿಕರು ತಮ್ಮ ಸಂಕಷ್ಟಗಳಿಂದ ಪಾರಾಗುವುದರ ಜೊತೆಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ, ಕುಟುಂಬದವರಿಗೆ ಸಹಾಯ ದೊರೆ­ಯುವಂತೆ ಅವಕಾಶ ನೀಡಿದೆ.  ಕಟ್ಟಡ ಕಾರ್ಮಿಕರು ದುಶ್ಚಟಗಳಿಗೆ ದಾಸ­ರಾಗದೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು ಎಂದರು.

ಕೊಂಗಾಡಿಯಪ್ಪ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಮಾತ­ನಾಡಿ,  ‘ಕಟ್ಟಡ ಕಾರ್ಮಿಕರು ಸೌಲಭ್ಯ­ಗಳನ್ನು  ಪಡೆಯಲು  ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಪಡೆ­ಯಬೇಕಾಗಿದೆ. ಕಾರ್ಮಿಕ ಇಲಾಖೆಯ­ವರು ನೀಡುವ ಗುರುತಿನ ಚೀಟಿ ಸರ್ಕಾರ ಹಲವು ಸೌಲಭ್ಯ ಪಡೆಯಲು ನೆರವು ನೀಡುತ್ತದೆ.

ಕಾರ್ಮಿಕ ಇಲಾ­ಖೆಯವರು ಗುರುತಿನ ಚೀಟಿ ಹೊಂದಿ­ರುವ ಕಟ್ಟಡ ಕೂಲಿ ಕಾರ್ಮಿಕರಿಗೆ  ವೈದ್ಯಕೀಯ ವೆಚ್ಚ, ಪಿಂಚಣಿ ಸೌಲಭ್ಯ, ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನಸಹಾಯ,  ಮನೆ ಕಟ್ಟಿಕೊಳ್ಳಲು ಅಥವಾ ಖರೀದಿಸಲು ಸಬ್ಸಿಡಿಯೊಂದಿಗೆ ಧನಸಹಾಯ ಮುಂತಾದ ಸೌಲಭ್ಯಗಳನ್ನು ಪಡೆಯ­ಬಹು­ದಾಗಿದೆ ಎಂದರು. 

೧೮ ವರ್ಷ ಮೇಲ್ಪಟ್ಟ ಮತ್ತು ೬೦ ವರ್ಷದ ಒಳಗಿರುವ ಎಲ್ಲಾ ಕಟ್ಟಡ ಕಾರ್ಮಿಕರು ವರ್ಷದಲ್ಲಿ ಕನಿಷ್ಠ ೯೦ ದಿನಗಳ ಕಾಲ ಕಟ್ಟಡದ ಕೆಲಸದಲ್ಲಿ ತೊಡಗಿಸಿಕೊಂಡವರು, ಮಣ್ಣು ಕೆಲಸ, ಇಟ್ಟಿಗೆ ಕೆಲಸ, ಮರಳು ಕೆಲಸ ಮಾಡುವವರೂ ತಾಲ್ಲೂಕು ಕಾರ್ಮಿಕ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ನ್ಯಾಯಾ­ಧೀಶ­ರುಗಳಾದ ಎ.ನಾಗಿರೆಡ್ಡಿ,  ಎಂ.ಗಣಪತಿ ಪ್ರಶಾಂತ್, ಸಿಮಿಜು ಕಾರ್ಪೊರೇಷನ್ ವ್ಯವಸ್ಥಾಪಕ ಅಭಿಜಿತ್‌ ಸಿಂಧೆ, ವಕೀಲರುಗಳಾದ ರೇಣುಕಾಮೂರ್ತಿ, ಮೋಹನ್‌ಕುಮಾರ್, ಆರ್.ಕೇಶವ­ಮೂರ್ತಿ, ಪ್ರಭಾಕರ ರಾಜು, ತಾಲ್ಲೂಕು ಕಾರ್ಮಿಕ ಇಲಾಖೆ ನಿರೀಕ್ಷಕ ವೆಂಕಟೇಶ್   ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.