ADVERTISEMENT

ದೇವರ ಕಲ್ಲುಗಾಲಿ ಬ್ರಹ್ಮರಥೋತ್ಸವಕ್ಕೆ ತಯಾರಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 5:17 IST
Last Updated 16 ಜುಲೈ 2013, 5:17 IST

ವಿಜಯಪುರ:  `ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಮಹಾದ್ವಾರದ ಬಳಿ ಜು.16 ರಿಂದ 20 ರವರೆಗೆ ಲಕ್ಷ್ಮೀ ವೆಂಕಟರಮಣ ದೇವರ ಕಲ್ಲುಗಾಲಿ ಬ್ರಹ್ಮರಥೋತ್ಸವ ನಡೆಯಲಿದೆ.

ರಥೋತ್ಸವದ ಅಂಗವಾಗಿ ವಿಜಯಪುರ ಜೇಸಿಐ ಸಂಸ್ಥೆ ವತಿಯಿಂದ 5 ದಿನಗಳ `ಜೇಸಿ ಗಾನ ಗಂಗೋತ್ರಿ ಸಂಗೀತ ಹಬ್ಬ'ವನ್ನು ಏರ್ಪಡಿಸಲಾಗಿದೆ' ಎಂದು ಜೇಸಿಐ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ತಿಳಿಸಿದ್ದಾರೆ.

ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಥೋತ್ಸವದ ಸಂದರ್ಭದಲ್ಲಿ ಜನಪದ, ಗೀಗೀ ಪದ, ಭಾವಗೀತೆಗಳು, ತತ್ವಪದ, ದಾಸರ ಕೀರ್ತನೆ, ಚಲನಚಿತ್ರ ಗೀತೆ, ಪ್ರಖ್ಯಾತ ಕವಿಗಳ ಹಾಡುಗಳನ್ನು ಕೇಳುವ ಅಪೂರ್ವ ಅವಕಾಶವನ್ನು ಜನರಿಗೆ ಒದಗಿಸಲಾಗಿದೆ' ಎಂದು ತಿಳಿಸಿದರು.  ಐದು ದಿನ ನಡೆಯುವ ಕಾರ್ಯಕ್ರಮದಲ್ಲಿ ರಂಗಭೂಮಿ, ವಾಣಿಜ್ಯ, ಕೃಷಿ, ಅಧ್ಯಾತ್ಮ, ಸಂಗೀತ, ಗಾಯನ ಮುಂತಾದ ಹತ್ತು-ಹಲವು ಪ್ರಕಾರಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಜೇಸಿಐ  ಗಾನ ಗಂಗೋತ್ರಿ ಕಾರ್ಯಕ್ರಮವನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೆಂ.ಗ್ರಾ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಶಾಸಕ ಪಿಳ್ಳಮುನಿಶ್ಯಾಮಪ್ಪ, ಮಾಜಿ ಶಾಸಕ ವೆಂಕಟಸ್ವಾಮಿ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಬಯಪಾ ಮಾಜಿ ಅಧ್ಯಕ್ಷ ಎಸ್.ಎಲ್.ಎನ್.ಅಶ್ವತ್ಥ್ ನಾರಾಯಣ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ಮಾಜಿ ಕಾರ್ಯದರ್ಶಿ ವಿ.ಮಂಜುನಾಥ್ ಭಾಗವಹಿಸುವರು. ಮೊದಲ ದಿನದಂದು ಸಂಜೆ 7-15 ಕ್ಕೆ ಕೋಲಾರ ರಾಜಪ್ಪ ಮೇಳದ ಸಂಗಡಿಗರಿಂದ ಜಾನಪದ, ಗೀಗೀ ಪದ ಹಾಗೂ ಭಾವಗೀತೆಗಳ ಗಾಯನ ಏರ್ಪಡಿಸಲಾಗಿದೆ.

ಜು.17 ರಂದು ಶ್ರೀ ಕ್ಷೇತ್ರ ಕೈವಾರದ ಟಿ.ಎಲ್.ಆನಂದ್ ಮತ್ತು ೀದೇವಿ ಅವರಿಂದ ತತ್ವಪದ, ಹಾಗೂ ದಾಸರ ಕೀರ್ತನೆಗಳನ್ನೊಳಗೊಂಡ ತತ್ವಾಮೃತ ಧಾರೆ,  ಜು.18 ರಂದು ಮತ್ತೇ ಹಾಡಿತು ಕೋಗಿಲೆ ಖ್ಯಾತಿಯ ಕುಹೂ ಕುಹೂ ಶ್ರೀನಿವಾಸ್ ಅವರಿಂದ ಗಾನ ಗಂಧರ್ವ ಪಿ.ವಿ.ಶ್ರೀನಿವಾಸ್ ಅವರ ಗೀತೆಗಳ ಗಾಯನ, ಜು.19 ರಂದು ಲಹರಿ ಸಂಗೀತ ತಂಡದ ಹೆಸರಾಂತ ಸಚಿನ್ ಅವರಿಂದ ಸಂಗೀತ ಪರ್ವ ರಸಮಂಜರಿ ಕಾರ್ಯಕ್ರಮ, ಜು.20 ಶನಿವಾರದಂದು ನೃತ್ಯ ಕಾರಂಜಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

  ಜೇಸಿಐ ಉಪಾಧ್ಯಕ್ಷ ತ್ಯಾಗರಾಜು, ನಿರ್ದೇಶಕ ಗೋಪಾಲ್, ಯುವ ಜೇಸಿಐ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.