ADVERTISEMENT

ನಾಡು- ನುಡಿ ಸಾಧಕರನ್ನು ಸ್ಮರಿಸಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ದೊಡ್ಡಬಳ್ಳಾಪುರ: ಕನ್ನಡ ನಾಡು-ನುಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಸಿ.ಅಶ್ವತ್ಥ್ ಅವರನ್ನು ಸದಾ ಸ್ಮರಿಸಿ, ಗೌರವಿಸಬೇಕು ಎಂದು ಲೇಖಕ ಡಾ.ನಾ.ಸೋಮೇಶ್ವರ ಹೇಳಿದರು.

ನಗರದ ಸಂಸ್ಕೃತಿ ಟ್ರಸ್ಟ್ ವತಿಯಿಂದ ಪುರಭವನದಲ್ಲಿ ನಡೆದ ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದ ಧೃವತಾರೆಗಳನ್ನು ಸ್ಮರಿಸುವ `ನೆನಪು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಸಿ.ಅಶ್ವತ್ಥ್  ಮತ್ತಿತರರು ಅಮೋಘ ಸೇವೆ ಸಲ್ಲಿಸಿದ್ದಾರೆ. ಭಾಷೆ ಮೇಲಿದ್ದ ಇವರ ಪ್ರಭುತ್ವ ಇಂದಿನವರಿಗೆ ಮಾದರಿಯಾಗಬೇಕಿದೆ ಎಂದರು. ಕಲಾವಿದರಿಗೆ  ವಯಸ್ಸಾದಂತೆ ಅವರ ವರ್ಣರಂಜಿತ ಬದುಕು ಮರೆಯಾಗುತ್ತದೆ. ಬದುಕಿನ ಕೊನೆಯ ಕ್ಷಣಗಳನ್ನು ಕಷ್ಟಕಾಲದಲ್ಲಿ ಕಳೆದ ಉದಾಹರಣೆಗಳು ನಟರ ಬದುಕಿನಲ್ಲಿವೆ. ಇವೆಲ್ಲದರ ನಡುವೆ ಅವರ ಕಲಾಸಾಧನೆ ಚಿರಸ್ಥಾಯಿಯಾಗುತ್ತದೆ ಎಂದರು.

 ಸಿ.ಅಶ್ವತ್ಥ್ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದರು ಎಂದರು.
ಚಿತ್ರ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಶ್ವತ್ಥ್ ಅವರ ಕಲಾಸೇವೆ ಕುರಿತು ಮಾತನಾಡಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ  ಕೆ.ಎಂ.ಹನುಮಂತರಾಯಪ್ಪ, ನಗರಸಭಾ ಸದಸ್ಯ ಟಿ.ಎನ್. ಪ್ರಭುದೇವ್, ಜೆಡಿಎಸ್ ಮುಖಂಡ ವಿ.ಎನ್. ಮಂಜುನಾಥ್, ಪುರಸಭೆ ಮಾಜಿ ಸದಸ್ಯ ರುಮಾಲೆ ನಾಗರಾಜ್, ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್, ಚಿತ್ರ ನಿರ್ಮಾಪಕ ಮಾರುತಿ, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಕನ್ನಡ ಪಕ್ಷದ ಅಧ್ಯಕ್ಷ  ಸಂಜೀವ್‌ನಾಯಕ್, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಕಾರ್ಯದರ್ಶಿ ಸಂಪತ್ ಕುಮಾರ್, ಬಸವರಾಜ್ ಇತರರು ಇದ್ದರು.

ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ನಡೆದ ಭಾವಲಹರಿ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಸಿ.ಅಶ್ವತ್ಥ್ ಮತ್ತಿತರ ಕಲಾವಿದರ ಸ್ಮರಣೆಯ ಗೀತೆಗಳನ್ನು ಹಾಡಲಾಯಿತು. ಜೂ.ವಿಷ್ಣುವರ್ಧನ್ ಖ್ಯಾತಿಯ ರಾಜು ಅವರಿಂದ ವಿಷ್ಣುವರ್ಧನ್ ಅಭಿನಯದ ಗೀತೆಗಳ ಗಾಯನ ಮತ್ತು ಅಭಿನಯ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.