ADVERTISEMENT

ಪಕ್ಷಾಂತರ ಅಭ್ಯರ್ಥಿಗಳಿಗೆ ಟಿಕೆಟ್-ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 19:17 IST
Last Updated 27 ನವೆಂಬರ್ 2012, 19:17 IST

ದೊಡ್ಡಬಳ್ಳಾಪುರ: ತಾಲ್ಲೂಕು ಸಮಿತಿ ನೀಡುವ ಶಾಸಕ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಯಾವುದೇ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡಿದರೂ ನಾವೆಲ್ಲರು ಒಟ್ಟಾಗಿ ಕೆಲಸ ಮಾಡುತ್ತೇವೆ. ಆದರೆ ತಾಲ್ಲೂಕಿನವರಲ್ಲದ ಮತ್ತು ಪಕ್ಷಾಂತರ  ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ವೀಕ್ಷರಿಗೆ ಎಚ್ಚರಿಕೆ ನೀಡಿದ ಪ್ರಸಂಗ ಸೋಮವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ವೀಕ್ಷಕರ ಸಭೆಯಲ್ಲಿ ನಡೆಯಿತು.

ವಿಧಾನ ಸಭಾ ಚುನಾವಣೆಯ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ಮಾಜಿ ಶಾಸಕರಾಗಿ ತಾಲ್ಲೂಕಿನ ಜನರ ಸೇವೆ ಮಾಡಿದ್ದೇನೆ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದರೆ ಸಂತೋಷದಿಂದ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಅವರ ಗೆಲುವುಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ರಾಜ್ಯ ವೀಕ್ಷಕರಾಗಿ ಆಗಮಿಸಿದ್ದ ರಾಜ್ಯ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಶಾಸಕ ಸ್ಥಾನದ ಟಿಕೆಟ್ ನಿರ್ಧಾರ ದೆಹಲಿಯಲ್ಲಿ ನಡೆಯುವ ಕಾಲ ದೂರವಾಗಿದೆ. ತಾಲ್ಲೂಕು ಸಮಿತಿಗಳು ನೀಡುವ ಪಟ್ಟಿಯನ್ನು ಆಧರಿಸಿಯೇ ಈ ಭಾರಿ ವಿಧಾನ ಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಮುಖಂಡರ ನಿರ್ಧಾರವೇ ಅಂತಿಮ ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಅಪ್ಪಕಾರನಹಳ್ಳಿ ವೆಂಕಟೇಶ್, ಬಿ.ಸಿ.ವೆಂಕಟೇಶ್, ಎಸ್.ಆರ್.ಮುನಿರಾಜು ಸೇರಿದಂತೆ 9 ಜನ ಆಕಾಂಕ್ಷಿಗಳು ಸಭೆಯಲ್ಲಿ ತಮ್ಮ ಮನವಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಚ್ಚೇಗೌಡ, ಮಾಜಿ ಶಾಸಕ ಕರಿಯಣ್ಣ, ಪ್ರೊ .ಐ.ಕೆ.ಸನದಿ, ಆನಂದ್ ಹಾಗೂ ಮತ್ತಿತರರು ಭಾಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.