ADVERTISEMENT

ಫಲಿತಾಂಶ: ಸಮಾಲೋಚನ ಸಭೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:30 IST
Last Updated 18 ಫೆಬ್ರುವರಿ 2011, 18:30 IST

ದೇವನಹಳ್ಳಿ : ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಪೋಷಕರು ಮತ್ತು ಶಿಕ್ಷಕರು ಅವರೊಂದಿಗೆ ಸಮಾಲೋಚಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಜಿ.ಪಂ. ಸದಸ್ಯ ಬಿ.ರಾಜಣ್ಣ ತಿಳಿಸಿದರು.ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ನಡೆದ ವಿದ್ಯಾರ್ಥಿಗಳು ಮತ್ತು ಪೋಷಕರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಚನ್ನಹಳ್ಳಿ ಶಾಲೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದೆ.ಈ ಬಾರಿಯು ಇದು ಪುನರಾವರ್ತನೆ ಯಾಗಬೇಕು ಅತ್ಯುನ್ನತ ಅಂಕಗಳಿಸಿದ್ದಲ್ಲಿ ಪ್ರತಿ ವಿದ್ಯಾರ್ಥಿಗೂ ತಲಾ ಒಂದು ಸಾವಿರ ನಗದು ಬಹುಮಾನ ನೀಡುವುದಾಗಿ ಭರವಸೆ ನೀಡಿದರು.

ಜಿ.ಪಂ. ಅನುದಾನದಿಂದ ಶಾಲಾ ಆವರಣದಲ್ಲಿ ಸೈಕಲ್ ನಿಲ್ದಾಣ, ಮೈದಾನದ ಕಾಂಪೌಂಡ್, ಶಾಲಾ ದುರಸ್ತಿ ಹಾಗೂ ಕ್ರೀಡಾ ಚಟುವಟಿಕೆಗಾಗಿ 400ಮೀ ಟ್ರ್ಯಾಕ್‌ಗೆ ಅನುದಾನ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದೆಂದರು.

ಮುಖ್ಯ ಶಿಕ್ಷಕ ಎಂ.ವೆಂಕಟೇಶ್ ಮಾತನಾಡಿ, 9 ಗ್ರಾಮಗಳಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಆಗಮಿಸುತ್ತಿದ್ದು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು. ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು, ಆಯಾ ಗ್ರಾಮದ ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದಾರೆ. ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.ಗ್ರಾ.ಪಂ. ಅಧ್ಯಕ್ಷ ನಾಗರಾಜಪ್ಪ, ಉಪಾಧ್ಯಕ್ಷ ಎಂ.ಸಿ.ರಾಜಣ್ಣ, ಪಂಚಾಯಿತಿ ಸದಸ್ಯರು, ಪೋಷಕರುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.