ADVERTISEMENT

ರಾಜ್ಯದಲ್ಲಿ ಗ್ರಾಮಸ್ವರಾಜ್ಯದ ಕನಸು ನನಸು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:19 IST
Last Updated 24 ಅಕ್ಟೋಬರ್ 2017, 5:19 IST

ವಿಜಯಪುರ: ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವಂತಹ ಕಾರ್ಯವನ್ನು ರಾಜ್ಯದಲ್ಲಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಕೆ.ವೆಂಕಟಸ್ವಾಮಿ ಹೇಳಿದರು. ಭಟ್ರೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸೋಮವಾರ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೈಲಿಗೆ ಹೋಗಿ ಬಂದಿರುವ ನಾಯಕರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾಗಿಲ್ಲ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಜನತೆಗೆ ಮೋಸ ಮಾಡುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್‌ ಪಕ್ಷದ ಸಾಧನೆಯನ್ನು ಪರಿಚಯಿಸುವುದರ ಜತೆಗೆ ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಲ್ಲಾ ಜಾತಿ ವರ್ಗದ ಜನತೆಗೆ ಸಮಾನತೆಯ ಅಡಿಯಲ್ಲಿ ಕೊಂಡೊಯ್ಯುವಂತಹ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ ವಿ. ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದರು. ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಸಾಧನೆಗಳನ್ನು ಗಮನಿಸಿ ಜನರು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ನೀಡಲಿದ್ದಾರೆ ಎಂದರು. ಮನೆ ಮನೆಗೂ ತೆರಳಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕಿರುಹೊತ್ತಗೆ ನೀಡಿದರು.

ವಿಜಯಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ಕೆಪಿಸಿಸಿ ಸದಸ್ಯ ಸಿ.ಕೆ.ರಾಮಚಂದ್ರಪ್ಪ, ಚಂದ್ರಶೇಖರ್, ನರಸಿಂಹನಾಯಕ್, ರೋಡಹಳ್ಳಿ ರಾಜಣ್ಣ, ಪುರಸಭಾ ಸದಸ್ಯ ಮುನಿಚಿನ್ನಪ್ಪ, ಮುಖಂಡ ಸಂಪತ್ ಕುಮಾರ್, ವೆಂಕಟಗಿರಿಕೋಟೆ ಚಿನ್ನಪ್ಪ, ಪ್ರದೀಪ್, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಮಾರುತಿ, ಜ್ಯೋತಿ ಬಸವರಾಜು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವಿನೋದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.