ADVERTISEMENT

ವಾಹನಗಳ ನೋಂದಣಿ ಫಲಕ ತೆರವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 4:54 IST
Last Updated 30 ಅಕ್ಟೋಬರ್ 2017, 4:54 IST

ದೇವನಹಳ್ಳಿ: ‘ಕಾರು ಆ ಕಡೆ ಹೋಗುತ್ತಿದೆ ನೋಡಪ್ಪ. ನಿಲ್ಸು ಇಲ್ಲೊಂದು ಬರುತ್ತಿದೆ ಸೈಡಿಗೆ ಹಾಕ್ಸು. ಏನಪ್ಪ ಯಾವ ಸಂಘಟನೆ ನಿಂದು. ಬೋರ್ಡ್ ಬಿಚ್ಕೋತಿಯೋ ನಾವೇ ಬಿಚ್ಚಬೇಕೋ’– ಇದು ದೇವನಹಳ್ಳಿ ಸಂಚಾರ ಪೊಲೀಸರು ಅಸಮರ್ಪಕ ನೋಂದಣಿ ಫಲಕ ತೆರವು ಕಾರ್ಯಚರಣೆ ವೇಳೆ ಕೇಳಿ ಬಂದ ಮಾತುಗಳು.

ಪೊಲೀಸ್ ಇಲಾಖೆ ಆದೇಶದಂತೆ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ಕೆ.ನಾಗರಾಜ್ ನೇತೃತ್ವದ ತಂಡ ದೇವನಹಳ್ಳಿ ನಗರ ಮತ್ತು ನಗರದ ಹೊರವಲಯದ ಬೈಪಾಸ್‌ ರಸ್ತೆ ಬಳಿ ನಾಲ್ಕಾರು ಕಡೆ ನಾಮಫಲಕ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು.

ಈ ಕುರಿತು ಮಾತನಾಡಿದ ಕೆ.ನಾಗರಾಜ್, ಮೋಟಾರ್ ವಾಹನ ಕಾಯ್ದೆ ವಿರುದ್ಧವಾಗಿ ವಾಹನಗಳ ನೋಂದಣಿ ಸಂಖ್ಯೆ ಫಲಕದ ಮುಂಭಾಗ ಮತ್ತು ಹಿಂಭಾಗದಲ್ಲಿ ಯಾವುದೇ ಸಂಘ ಸಂಸ್ಥೆ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆ ಅಧ್ಯಕ್ಷರು ಮತ್ತು ಸದಸ್ಯರು ಕನ್ನಡ ಪ್ರಗತಿಪರ ಸಂಘಟನೆಗಳು, ಸಮುದಾಯದ ಅಧ್ಯಕ್ಷರು ಮತ್ತು ಸದಸ್ಯರು, ನಾಮಫಲಕ ಅಳವಡಿಸಿಕೊಳ್ಳುವುದು ಕಾನೂನುಬಾಹಿರ ಎಂದರು.

ADVERTISEMENT

ಸಂಘಟನೆಗಳ ಹೆಸರಿನಲ್ಲಿ ನಾಮಫಲಕ ಹಾಕಿಕೊಂಡು ಕೆಲವರು ವಾಗ್ವಾದ ನಡೆಸುವುದು, ರಸ್ತೆ ನಿಯಮ ಉಲ್ಲಂಘಿಸುವುದು, ವಿನಾಕಾರಣ ವಾಹನ ಚಾಲಕರಿಗೆ ಕಿರಿಕಿರಿಯನ್ನುಂಟು ಮಾಡುವುದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದರು. ಇದು ಮೊದಲ ಬಾರಿಗೆ ದೇವನಹಳ್ಳಿ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದು ನಿರಂತರವಾಗಲಿದೆ.ನಾಮಫಲಕ ದುರುಪಯೋಗವಾಗುತ್ತಿದೆ. ಇದನ್ನು ಪರಿಗಣಿಸಿ ಪ್ರಸ್ತುತ 38 ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದರು. 

ದೂರು ದಾಖಲಾದ ಪ್ರಕರಣಗಳ ಸಂಘ ಸಂಸ್ಥೆಗಳ ವಾಹನಗಳ ಸಂಖ್ಯೆ: ಜಯ ಕರ್ನಾಟಕ ಸಂಘಟನೆ ಮೂರು, ಕೆಂಪೇಗೌಡ ಸೇನೆ ಎರಡು, ಕರ್ನಾಟಕ ರಕ್ಷಣಾ ವೇದಿಕೆ 12, ಮಾನವ ಹಕ್ಕುಗಳು–ಐದು, ಕರ್ನಾಟಕ ಸರ್ಕಾರ–ಎರಡು, ವಾಲ್ಮೀಕಿ ಸಂಘ–ಒಂದು, ದಲಿತ ಸಂರಕ್ಷಣಾ ವೇದಿಕೆ ಒಂದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒಂದು ಆಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಒಂದು, ಕೋಲಾರ ತರಬೇತಿ ಕೇಂದ್ರ ಒಂದು, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎರಡು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಎರಡು, ದಲಿತ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎರಡು, ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಒಂದು, ಅಖಿಲ ಕರ್ನಾಟಕ ಡಾ. ಸುಬಾಷ್ ಭರಣಿ ಅಭಿಯಾನಿಗಳ ಸಂಘ ಒಂದು– ಹೀಗೆ ಒಟ್ಟು 38, ಸಂಘ ಸಂಸ್ಥೆಗಳ ನಾಮಫಲಕ ತೆರವುಗೊಳಿಸಿ ಪದಾಧಿಕಾರಿಗಳಿಗೆ ಆಘಾತ ನೀಡಲಾಯಿತು. ಸಂಚಾರ ಪೊಲೀಸರ ಈ ಕ್ರಮವು ಸಾರ್ವಜನಿಕವಾಗಿ ತೊಂದರೆಗೆ ಒಳಗಾದ ಜನರ ಪ್ರಶಂಸೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.