ADVERTISEMENT

ವೃದ್ಧೆಯ ಹೆಸರಿನಲ್ಲಿ ಹಣ ವಸೂಲಿ: ವಂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 13:08 IST
Last Updated 22 ಜೂನ್ 2013, 13:08 IST

ದೊಡ್ಡಬಳ್ಳಾಪುರ: ವೃದ್ಧೆಯೊಬ್ಬರು ಕಾಣೆಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಕುಟುಂಬದವರಿಂದ ್ಙ 30 ಸಾವಿರ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ: ನಗರದ ಚೈತನ್ಯ ನಗರದ ನಿವಾಸಿ ಅಶ್ವತ್ಥಮ್ಮ ಕುಟುಂಬದವರೊಂದಿಗೆ ಕಳೆದ ಮೇ. 27ರಂದು ತಿರುಪತಿಗೆ ಹೋಗಿದ್ದರು. ಮೇ.28 ರಂದು ದೇವರ ದರ್ಶನಕ್ಕೆಂದು ಬೆಟ್ಟಕ್ಕೆ ಹೋಗಿದ್ದಾರೆ. ಅಂದೇ ಸಂಜೆ 5 ಗಂಟೆ ಸುಮಾರಿಗೆ ಅವರು ಕಾಣೆಯಾಗಿದ್ದಾರೆ. ಅಶ್ವತ್ಥಮ್ಮ ನಾಪತ್ತೆಯಾಗಿದ್ದರಿಂದ ಕಂಗಾಲಾದ ಕುಟುಂಬದವರು ತಿರುಮಲದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟದ ಹಲವೆಡೆ ಪೋಸ್ಟರ್‌ಗಳನ್ನು ಹಾಕಿ ಮೊಬೈಲ್ ನಂಬರ್‌ಗಳನ್ನು ಸಹಾ ಹಾಕಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಜೂ. 4 ರಂದು ಪೋಸ್ಟರ್‌ಗಳಲ್ಲಿದ್ದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ನೀವು ಹುಡುಕುತ್ತಿರುವ ಮಹಿಳೆ ನಮ್ಮ ಬಳಿಯಿದ್ದಾರೆ.  ನಮ್ಮ ಕಷ್ಟಗಳಿಗೆ ಸ್ಪಂದಿಸಿ ್ಙ 30 ಸಾವಿರ ನೀಡಿ ಅಜ್ಜಿಯನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ.

ಅಶ್ವತ್ಥಮ್ಮ ಅವರ ಪತಿ ಲಕ್ಷ್ಮೀನಾರಾಯಣ ಹಾಗೂ ಮಗ ಪುಟ್ಟರಾಜು ಒಪ್ಪಿಕೊಂಡು ಅಪರಿಚಿತರಿಗೆ ಹಣ ನೀಡಿದ್ದಾರೆ. ಅಶ್ವತ್ಥಮ್ಮ ಎಲ್ಲಿ ಎಂದು ಕೇಳಿದಾಗ ಪ್ರಸಾದ ನೀಡುವ ಸ್ಥಳದಲ್ಲಿ ಕೂರಿಸಿದ್ದೇವೆ ಕರೆದುಕೊಂಡು ಹೋಗಿ ಎಂದಿದ್ದಾರೆ.

ವಂಚನೆ ಬಯಲು: ಅಶ್ವತ್ಥಮ್ಮ  ಸಿಕ್ಕೇ ಬಿಟ್ಟರು ಎನ್ನುವ ಸಂತಸದಿಂದ ಅಪರಿಚಿತರು ಹೇಳಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅವರು ಇರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬದವರು ಪರಿಶೀಲಿಸಿದಾಗ ಅಪರಿಚಿತರು ವಂಚಿಸಿರುವುದು ತಿಳಿದಿದೆ.

ಮತ್ತೇ ಬಂದ ಫೋನ್:  ನಂತರ ಜೂ. 7ರಂದು ಮತ್ತೇ ಅಪರಿಚಿತರು ಕರೆ ಮಾಡಿ ರೂ  50 ಸಾವಿರ ನೀಡಿದರೆ ಅಜ್ಜಿ ಸಿಗುತ್ತಾರೆ ಎಂದು ಹೇಳಿದ್ದಾರೆ. ಈ ಬಾರಿ ಜಾಗೃತಗೊಂಡ ಕುಟುಂಬದ ಸದಸ್ಯರು ದೊಡ್ಡಬಳ್ಳಾಪುರ ಪೊಲೀಸರ ನೆರವಿನೊಂದಿಗೆ ಹಣ ತೆಗೆದುಕೊಂಡು ಹೋಗಿದ್ದಾರೆ. ಹಾಸನದ ಬೆಳ್ಳೂರು ಕ್ರಾಸ್ ಬಳಿ ವಂಚಿಸುತ್ತಿದ್ದವರ ಪೈಕಿ ಓರ್ವ ಮಹಿಳೆ ಸಿಕ್ಕಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಯುವಕ ನಾಪತ್ತೆಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.