ADVERTISEMENT

`ಹಿಂದಿನ ಶಾಸಕರಿಗಿಂತ ಹೆಚ್ಚು ಅನುದಾನ ತರುವೆ'

ಕಾಂಗ್ರೆಸ್ ಹಿರಿಯ ಮುಖಂಡ ಆರ್.ಜಿ.ವೆಂಕಟಾಚಲಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:42 IST
Last Updated 8 ಜುಲೈ 2013, 10:42 IST

ದೊಡ್ಡಬಳ್ಳಾಪುರ: `ಹಿಂದಿನ ಶಾಸಕರಿಗಿಂತಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ' ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ಜಿ.ವೆಂಕಟಾಚಲಯ್ಯ ಹೇಳಿದರು.

ಭಾನುವಾರ ತಾಲ್ಲೂಕಿನ ಕೊನಘಟ್ಟ ಹಾಗೂ ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಭೆ ನಡೆಸಿ ಅವರು ಮಾತನಾಡಿದರು.

`ತಾಲ್ಲೂಕಿನ ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ. ಮಳೆಗಾಲದಲ್ಲಂತೂ ವೃದ್ಧರು, ಮಕ್ಕಳು ನಡೆದಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ತಯಾರಿಸಲಾಗುವುದು' ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, `ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಶ್ರಮಿಸುತ್ತೇನೆ. ಸರ್ಕಾರಿ ಕಚೇರಿಗಳಲ್ಲಿ ಶ್ರೀಸಾಮಾನ್ಯರ ಕೆಲಸಗಳು ಸುಗಮವಾಗಿ ನಡೆಯಬೇಕು. ಇದಕ್ಕಾಗಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಬಹುತೇಕ ನಿವಾರಣೆಯಾಗಿದೆ. ಸದ್ಯದಲ್ಲೇ ನಗರಕ್ಕೆ ಜಕ್ಕಲಮಡಗು ಜಲಾಶಯದಿಂದ ನೀರು ಸರಬರಾಜು ಆರಂಭಗೊಳ್ಳಲಿದೆ' ಎಂದು ಹೇಳಿದರು.

ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗನಹಳ್ಳಿ ಗ್ರಾಮದಲ್ಲಿ ನಡೆದ ಕೃತಜ್ಞತ ಸಭೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಿ.ರಂಗರಾಜು, ತಾಲ್ಲೂಕು ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಬೈರೇಗೌಡ, ನಗರಸಭೆ ಸದಸ್ಯ ತಿಮ್ಮಣ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ನಾರಾಯಣಗೌಡ, ಕಾಂಗ್ರೆಸ್ ಮುಖಂಡ ಡಿ.ಜಿ.ರಾಜಗೋಪಾಲ್, ಅಶೋಕ್ ಜಿ.ಪಂ.ಮಾಜಿ ಸದಸ್ಯೆ ಜಯಲಕ್ಷ್ಮಮ್ಮ, ಗ್ರಾ.ಪಂ.ಉಪಾಧ್ಯಕ್ಷೆ ಗಿರಿಜಮ್ಮ, ಗ್ರಾ.ಪಂ.ಸದಸ್ಯೆ ನಾಗರತ್ನ, ಹಿಂದುಳಿದ ವರ್ಗಗಳ ತಾಲ್ಲೂಕು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಎಸ್ಸಿ ಸಮಿತಿ ಎಂ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ದೇಣಿಗೆ ಸಂಗ್ರಹ: ಉತ್ತರಾಖಂಡ ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಯುವ ಸಮಿತಿ ವತಿಯಿಂದ ಸೋಮವಾರ (ಜು.8) ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ನಡೆಸಲಾಗುವುದು. ದೇಣಿಗೆ ಸಂಗ್ರಹದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಯುವ ಕಾಂಗ್ರೆಸ್ ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.