ADVERTISEMENT

ಸಂಸ್ಕರಣ, ದಾಸ್ತಾನು ಘಟಕ ಆರಂಭ

ಇಸ್ರೇಲ್ ಮಾದರಿ ಕೃಷಿಗೆ ₹300 ಕೋಟಿ ಅನುದಾನ ಬಳಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 15:56 IST
Last Updated 23 ಡಿಸೆಂಬರ್ 2018, 15:56 IST
ಸಾಧಕ ರೈತರಿಗೆ ಸನ್ಮಾನಿಸಲಾಯಿತು
ಸಾಧಕ ರೈತರಿಗೆ ಸನ್ಮಾನಿಸಲಾಯಿತು   

ದೇವನಹಳ್ಳಿ: ಸರ್ಕಾರ ಇಸ್ರೇಲ್ ಮಾದರಿ ಕೃಷಿಗೆ ₹300 ಕೋಟಿ ಅನುದಾನ ಬಳಸಲು ಚಿಂತನೆ ನಡೆಸಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಸಹಾಯಕ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ‘ರಾಷ್ಟ್ರೀಯ ರೈತರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಗೂ ಮೊದಲು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅನುಸರಿಸುವ ನೀರು ಮಿತಬಳಕೆ, ಶೂನ್ಯ ಬಂಡವಾಳದಲ್ಲಿ ಹೆಚ್ಚು ಇಳುವರಿ, ಕೃಷಿ ಉತ್ಪನ್ನಗಳ ದಾಸ್ತಾನು ಮಳಿಗೆ ಪರಿಶೀಲಿಸಿ ಮಾಹಿತಿ ಪಡೆದು ನಮ್ಮ ರಾಜ್ಯದಲ್ಲಿನ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆ ಆರಂಭಿಸಲು ಚಿಂತನೆ ನಡೆಸಿದ್ದಾರೆ ಎಂದರು.

ADVERTISEMENT

ತಾಲ್ಲೂಕಿನ ಪೂಜನಹಳ್ಳಿ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿನ ಎರಡು ಎಕರೆ ಜಾಗದಲ್ಲಿ ₹45 ಕೋಟಿ ವೆಚ್ಚದಲ್ಲಿ ತೊಟಗಾರಿಕಾ ಬೆಳೆ ಉತ್ಪನ್ನಗಳ ಸಂಸ್ಕರಣ ಮತ್ತು ದಾಸ್ತಾನು ಘಟಕ ಹಾಗೂ ಹಣ್ಣಿನ ಪಾನೀಯಗಳ ಘಟಕ ಆರಂಭಿಸಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಕ್ರೀಮಿನಾಶಕ, ಬೀಜ ಮತ್ತು ಗೊಬ್ಬರ ಮಾರಾಟದಿಂದ ಕಂಪನಿಗಳು ಮತ್ತು ಮಾರಾಟಗಾರರು ಶ್ರೀಮಂತರಾಗುತ್ತಿದ್ದಾರೆ. ಸಾಲ ಮಾಡಿ ಕೃಷಿ ಮಾಡುವ ರೈತನ ಸ್ಥಿತಿ ಶೋಚನೀಯವಾಗಿದೆ. ರೈತರು ಎಷ್ಟೇ ಅನುಭವಿಗಳಾಗಿದ್ದರು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಮಾತನಾಡಿ, ಚೌಧರಿ ಚರಣಸಿಂಗ್ ಪ್ರಧಾನಿ ಆಗಿದ್ದ ಅಲ್ಪಕಾಲಾವಧಿಯಲ್ಲಿಯೇ ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಆದ್ದರಿಂದ ಅವರ ಜನ್ಮ ದಿನಾಚರಣೆಯನ್ನು ರೈತರ ದಿನಾಚರಣೆಯನ್ನಾಗಿ ಅಚರಿಸಲಾಗುತ್ತಿದೆ ಎಂದರು.

2018–19ನೇ ಸಾಲಿನ ಶ್ರೇಷ್ಠತೊಟಗಾರಿಕಾ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪುರಸ್ಕೃತ ಕೆ.ಎಸ್. ಹರೀಶ್ ಮಾತನಾಡಿ, ದೇಶದಲ್ಲಿ ರೈತರು ಒಂದೆಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಸಾಲಮನ್ನಾ ಮಾಡಿದ ತಕ್ಷಣ ರೈತರ ಸಮಸ್ಯೆ ಬಗೆ ಹರಿಯುವುದಿಲ್ಲ. ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕೆವಿಕೆ ವಿಜ್ಞಾನಿಗಳಾದ ವೆಂಕಟೇಗೌಡ, ವೀರನಾಗಪ್ಪ, ಬಮುಲ್ ಉಪಾಧ್ಯಕ್ಷ ಬಿ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಮಹೇಶ್, ಶೈಲಜಾ, ಚೈತ್ರ, ಶಶಿಕಲಾ, ಲಲಿತಮ್ಮ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ನಿರ್ದೆಶಕರಾದ ಬಿಜ್ಜವಾರ ಆನಂದ್, ಬಿಸೇಗೌಡ, ನಾರಾಯಣಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್, ರೈತ ಮುಖಂಡರಾದ ವೆಂಕಟೇಶ್, ಮುನಿಶ್ಯಾಮಪ್ಪ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.