ADVERTISEMENT

200 ದಿನ ಪೂರೈಸಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:21 IST
Last Updated 21 ಅಕ್ಟೋಬರ್ 2022, 6:21 IST
ಸಮಾವೇಶದಲ್ಲಿ ಭಾಗವಹಿಸಿದ್ದ ಖಾತೆದಾರರು
ಸಮಾವೇಶದಲ್ಲಿ ಭಾಗವಹಿಸಿದ್ದ ಖಾತೆದಾರರು   

ವಿಜಯಪುರ (ಬೆಂ.ಗ್ರಾಮಾಂತರ):ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಹೋರಾಟ ಗುರುವಾರ 200 ದಿನ ಪೂರೈಸಿದ್ದು, ಖಾತೆದಾರರ ಸಮಾವೇಶ ನಡೆಯಿತು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೇರಿದಂತೆ ಹಲವಾರು ಸಂಘಟನೆಗಳು ಸಮಾವೇಶಕ್ಕೆ ಬೆಂಬಲ ಘೋಷಿಸಿದ್ದವು.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ಭೂಮಿ ಕೊಡುವುದಿಲ್ಲ ಎಂದು ಖಾತೆದಾರರು ಸೇರಿದಂತೆ ಕುಂದಾಣ, ದೊಡ್ಡಬಳ್ಳಾಪುರ ರೈತರು ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು. ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಕೊಡುವುದಿಲ್ಲ ಎಂದು ಘೋಷಿಸಿದರು. 13 ರೈತರು ದಾಖಲೆಸಹಿತ ತಹಶೀಲ್ದಾರ್ ಶಿವರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಭೂಮಿ ಕೈಬಿಡುವಂತೆ ಮನವಿ ಮಾಡಿದರು.

ADVERTISEMENT

ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೈಯ್ಯಾರೆಡ್ಡಿ ಮಾತನಾಡಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಬೆಂಗಳೂರಿನ ಸುತ್ತಮುತ್ತ ಮುಂದಿನ 30 ವರ್ಷಗಳಲ್ಲಿ ರೈತರು ಇರುವುದಿಲ್ಲ ಎಂದು ನೀಡಿರುವ ಹೇಳಿಕೆ ಸತ್ಯವಾದುದು. ಮಠಗಳಲ್ಲಿ ನಡೆಯುತ್ತಿರುವ ದಾಸೋಹಕ್ಕೆ ದವಸ ಧಾನ್ಯ ಬೆಳೆದು ಕೊಡುವವರು ರೈತರು. ಅವರಿಗೆ ಭೂಮಿ ಇಲ್ಲವಾದರೆ ಆಹಾರ ಧಾನ್ಯಗಳು ಹೇಗೆ ಬರುತ್ತವೆ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಸುತ್ತಮುತ್ತ ಕೃಷಿ, ತೋಟಗಾರಿಕೆ ಭೂಮಿ ಉಳಿಯಬೇಕಾದರೆ ಹೋರಾಟದ ಸ್ಥಳಕ್ಕೆ ರೈತರು ಬರಬೇಕು. ಇಲ್ಲಿಂದಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೆ ಒಂದೇ ದಿನದಲ್ಲಿ ರೈತರಿಗೆ ನ್ಯಾಯ ಸಿಗಲಿದೆ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಅಭಿವೃದ್ಧಿ ಮಾಡುವ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ ಏನೇನು ಅಭಿವೃದ್ಧಿ ಮಾಡಿದ್ದಾರೆ. ಎಷ್ಟು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ ಎನ್ನುವ ಕುರಿತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಶ್ವೇತ ಪತ್ರ ಹೊರಡಿಸಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ವಕೀಲ ಸಿದ್ಧಾರ್ಥ ಮಾತನಾಡಿ, ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತ ಭೂಮಿ ಉಳಿಸಿಕೊಳ್ಳಲು ಹಿಂದೆಯೂ ದೊಡ್ಡ ಹೋರಾಟ ನಡೆದಿದೆ. ಹಲವು ಮಂದಿ ಜೈಲಿಗೆ ಹೋಗಿದ್ದರು. ನಾನು ಕೂಡ ರೈತರಿಗೆ ಭೂಮಿ ಉಳಿಸಲು ಹೋರಾಟ ಮಾಡಿದ್ದರ ಫಲವಾಗಿ ವೃತ್ತಿ ಜೀವನ ಕಳೆದುಕೊಳ್ಳುವಂತಾಯಿತು. ಜೀವನವನ್ನೇ ಮುಡುಪಾಗಿಟ್ಟಿದ್ದೇವೆ. ಈಗಲೂ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿರುವುದು ದುರಂತ ಎಂದರು.

ರೈತ ಮಂಜುನಾಥ್ ಮಾತನಾಡಿದರು. ಮುಖಂಡರಾದ ಮಾವಳ್ಳಿ ಶಂಕರ್, ವೀರಸಂಗಯ್ಯ, ಪ್ರಭಾ ದೊಡ್ಡಬೆಳವಂಗಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.