ADVERTISEMENT

‘3.5 ಲಕ್ಷ ಮನೆಗಳ ನಿರ್ಮಾಣದ ಗುರಿ’

ಸರ್ಜಾಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 12:55 IST
Last Updated 4 ಫೆಬ್ರುವರಿ 2020, 12:55 IST
ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು
ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು   

ಆನೇಕಲ್: ‘ಬೆಂಗಳೂರು ನಗರದ ಸೆರಗಿನಲ್ಲಿರುವ ಆನೇಕಲ್ ತಾಲ್ಲೂಕು ನಗರೀಕರಣದಿಂದಾಗಿ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಆನೇಕಲ್‌ ಸೇರಿದಂತೆ ಬೆಂಗಳೂರು ಸುತ್ತಲಿನ ಪ್ರದೇಶಗಳ ಮೂಲಸೌಲಭ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ಸರ್ಜಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಬೆಂಗಳೂರು ನಗರ ಸಬ್‌ಅರ್ಬನ್‌ ರೈಲ್ವೆ ಕಾಮಗಾರಿಯಿಂದ ಆನೇಕಲ್‌ ತಾಲ್ಲೂಕಿನ ಹುಸ್ಕೂರು, ಸಿಂಗೇನ ಅಗ್ರಹಾರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಇದರಿಂದ ಈ ಭಾಗದ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಸ್‌ಟಿಆರ್‌ಆರ್‌ ಯೋಜನೆಯು ಆನೇಕಲ್‌ ತಾಲ್ಲೂಕಿನ ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಮೂಲಕ ಹಾದು ಹೋಗಲಿದ್ದು ಈ ಯೋಜನೆಯಿಂದ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತವೆ. ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಅಸಂಘಟಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಫಲಾನುಭವಿಗಳಿಗೆ ₹ 1 ಲಕ್ಷ ಬಹುಮಹಡಿ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ಗೃಹ ಮಂಡಳಿ ವತಿಯಿಂದ 21 ಸಾವಿರ ನಿವೇಶನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 18,119 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸೂರಿಲ್ಲದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾರಿಯಿರುವ ಎಲ್ಲ ವಸತಿ ಯೋಜನೆಗಳಡಿ ನಿರ್ಮಾಣವಾಗುತ್ತಿರುವ ಸುಮಾರು 3.5 ಲಕ್ಷ ಮನೆಗಳನ್ನು ಮುಂಬರುವ ಜೂನ್‌ ತಿಂಗಳ ಒಳಗಾಗಿ ಪೂರ್ಣಗೊಳಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ’ ಎಂದು ಅವರು ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್‌ ಮಾತನಾಡಿ, ‘ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಬಡವರು ಅಲೆದಾಡಬೇಕಿಲ್ಲ. ಆಧಾರ್‌ ಕಾರ್ಡ್‌ ಮತ್ತು ಕಂದಾಯ ಇಲಾಖೆಯ ಸಹಾಯದಿಂದ ಎಲ್ಲ ವೇತನಗಳು ಫಲಾನುಭವಿಗಳ ಮನೆ ಬಾಗಿಲಿಗೆ ದೊರೆಯುತ್ತದೆ’ ಎಂದರು.

60 ಸಾವಿರ ಹಕ್ಕುಪತ್ರ ವಿತರಿಸುವ ಗುರಿ

‘ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಕಚೇರಿಯಲ್ಲಿದ್ದು ಕೆಲಸ ಮಾಡುವುದರ ಜತೆಗೆ ತಿಂಗಳಲ್ಲಿ ಒಂದು ದಿನ ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕು. 94 ಸಿ.ಸಿ. ಅಡಿಯಲ್ಲಿ ಈಗಾಗಲೇ 10 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಶೀಘ್ರದಲ್ಲಿ 60 ಸಾವಿರ ಹಕ್ಕುಪತ್ರಗಳನ್ನು ನೀಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಭದ್ರತೆ ಒದಗಿಸಲಾಗುವುದು’ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ‘ಆನೇಕಲ್‌ ತಾಲ್ಲೂಕಿನ ಬೊಮ್ಮಸಂದ್ರದವರೆಗೂ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದ‌ನ್ನು ಅತ್ತಿಬೆಲೆವರೆಗೆ ವಿಸ್ತರಿಸಬೇಕು. ಕಾವೇರಿ ಕುಡಿಯುವ ನೀರು ತಾಲ್ಲೂಕಿನ ಕೆಲ ಪ್ರದೇಶಗಳಿಗೆ ಮಾತ್ರ ಲಭ್ಯವಾಗಿದ್ದು ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಕಲ್ಪಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ‘ಸರ್ಜಾಪುರ ಗ್ರಾಮದಲ್ಲಿ ಪುರಾತನ ಕಲ್ಯಾಣಿ ಮತ್ತು ಅಶ್ವಥಕಟ್ಟೆ ಜೀರ್ಣೊದ್ಧಾರ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಬೀದಿದೀಪ ಸೇರಿದಂತೆ ₹ 20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ಸಲ್ಲಿಸಿದ್ದು ಸರ್ಜಾಪುರ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್‌, ಶಾಸಕರಾದ ಎಂ.ಸತೀಶ್‌ರೆಡ್ಡಿ, ಎಸ್‌.ಟಿ. ಸೋಮಶೇಖರ್, ಉಪಮೇಯರ್ ಮೋಹನ್‌ರಾಜ್, ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಸಂಪತ್‌ ಕುಮಾರ್, ಉಪಾಧ್ಯಕ್ಷೆ ಚಂದ್ರಕಲಾ ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.