ADVERTISEMENT

50 ಸಾವಿರ ಮಂದಿ ಮದ್ಯವ್ಯಸನ ಮುಕ್ತ: ಡಾ.ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 1:49 IST
Last Updated 5 ನವೆಂಬರ್ 2020, 1:49 IST
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಾಂಕೇತಿಕವಾಗಿ ನೋಟ್‌ಬುಕ್‌ ಬಿಡುಗಡೆ ಮಾಡಿದರು
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಾಂಕೇತಿಕವಾಗಿ ನೋಟ್‌ಬುಕ್‌ ಬಿಡುಗಡೆ ಮಾಡಿದರು   

ದೇವನಹಳ್ಳಿ: ‘ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಈ ಎರಡೂ ಸಂಸ್ಥೆಯಿಂದ 50 ಸಾವಿರಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ವ್ಯಸನ
ಮುಕ್ತರನ್ನಾಗಿ ಮಾಡಲಾಗಿದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ನೋಟ್‌ಬುಕ್‌ ಅನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಾವಿರಾರು ಬಡವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಣೆಗೆ ಮುಂದಾಗಿದ್ದಾರೆ. ಇದು ಅವರಲ್ಲಿರುವ ಶಿಕ್ಷಣದ ಕಾಳಜಿಯನ್ನು ತೋರಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿರುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ‍ಪ್ರಗತಿಗೆ ಉಳ್ಳವರ ಸಹಕಾರ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

ಪ್ರತಿಯೊಂದು ಸಮಸ್ಯೆಯನ್ನು ಸರ್ಕಾರ ಪರಿಹರಿಸಲು ಸಾಧ್ಯವಿಲ್ಲ. ಶಿಕ್ಷಣ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಿದೆ. ನಾಗರಿಕರು ಸಮಾಜದಲ್ಲಿ ಸಮಾನತೆಯಿಂದ ಜೀವನ ನಡೆಸಲು ನೆರವಾಗುವ ಉದ್ದೇಶದಿಂದ 35 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಯಿತು ಎಂದು
ಹೇಳಿದರು.

ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಮಾತನಾಡಿ, ‘ಗ್ರಾಮಾಂತರ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡಿದೆ ಎಂದು ಹೇಳಿದರು.

ಕಸಾಪ ಗೌರವಾಧ್ಯಕ್ಷ ರಾಮೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಕೆ. ನಂಜೇಗೌಡ, ಕೋಶಾಧ್ಯಕ್ಷ ಅಶ್ವಥನಾರಾಯಣಗೌಡ, ಮುಖಂಡರಾದ ಚಂದ್ರೇಗೌಡ, ಎಂ. ಸುರೇಶ್, ಲಕ್ಷ್ಮಿನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.